ಬಾಲಿವುಡ್ ಚಿತ್ರರಂಗದಲ್ಲಿ ಬಾಯ್ಕಾಟ್ ಟ್ರೆಂಡ್ ಮುಂದುವರೆದಿದ್ದು, ಇದೀಗ ಅದರ ಬಿಸಿ ಶಾರುಖ್ ಖಾನ್ – ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರಕ್ಕೆ ತಟ್ಟಿದೆ. ಚಿತ್ರದಲ್ಲಿನ ಬೇಶರಂ ರಂಗ್ ಹಾಡಿಗೆ ದೀಪಿಕಾ ಕೇಸರಿ ಉಡುಪು ಧರಿಸಿ ಕುಣಿದಿರುವುದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದರಿಂದ ನಮ್ಮ ಸಂಸ್ಕೃತಿಗೆ ಅಪಮಾನವಾಗಿದೆ ಎಂದು ದೂರಿರುವ ಹಿಂದೂ ಪರ ಸಂಘಟನೆಗಳು ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಲು ಕರೆ ನೀಡಿವೆ. ಇದರ ಮಧ್ಯೆ ಮತ್ತೊಬ್ಬ ನಟಿ ಕರೀನಾ ಕಪೂರ್ ಖಾನ್ ‘ಪಠಾಣ್’ ಚಿತ್ರದ ಪರ ಬ್ಯಾಟಿಂಗ್ ಮಾಡಿದ್ದು, ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸದೆ ಕೇವಲ ಹಾಡಿನ ಕಾರಣಕ್ಕೆ ಬಾಯ್ಕಾಟ್ ತೀರ್ಮಾನ ಸರಿಯಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಾಗೆ ಆಗಮಿಸಿದ್ದ ನಟಿ ಕರೀನಾ ಮಾಧ್ಯಮ ಪ್ರತಿನಿಧಿಗಳಿಗೆ ಈ ಪ್ರತಿಕ್ರಿಯೆ ನೀಡಿದ್ದು, ಸಿನಿಮಾಗಳೇ ಇಲ್ಲದಿದ್ದರೆ ಮನರಂಜನೆಗೆ ಏನು ಮಾಡಬೇಕು. ಜೀವನದ ಖುಷಿ, ಸಂತಸ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಅಮೀರ್ ಖಾನ್ ಜೊತೆ ಕರೀನಾ ಕಪೂರ್ ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಕೂಡಾ ಬಾಯ್ಕಾಟ್ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.