
ಅಮರಾವತಿಯ ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ತೆಲಂಗಾಣದಲ್ಲಿ ಪಕ್ಷದ ಸ್ಟಾರ್ ಪ್ರಚಾರಕಿ ನವನೀತ್ ರಾಣಾ ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು ಬೆಂಬಲಿಸಿ ಪ್ರಚಾರ ಮಾಡುವಾಗ ವಿವಾದವೆಬ್ಬಿಸಿದ್ದಾರೆ. ಓವೈಸಿ ಸಹೋದರರನ್ನು ಗುರಿಯಾಗಿಸಿಕೊಂಡು ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದೆ ನವನೀತ್ ರಾಣಾ ಟೀಕಿಸಿದ್ದಾರೆ.
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿದ ನವನೀತ್ ರಾಣಾ, “ಚಿಕ್ಕವನು ಹೇಳುತ್ತಾನೆ 15 ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿ ನಂತರ ನಾವು ಏನು ಮಾಡಬಹುದು ಎಂಬುದನ್ನು ತೋರಿಸುತ್ತೇವೆಂದು. ಆದರೆ ಅದಕ್ಕೆ ನಿಮಗೆ 15 ನಿಮಿಷಗಳು ಬೇಕಾದರೆ, ನಮಗೆ ಕೇವಲ 15 ಸೆಕೆಂಡ್ ಗಳು ಸಾಕು. ಪೊಲೀಸರನ್ನು 15 ಸೆಕೆಂಡುಗಳ ಕಾಲ ತೆಗೆದುಹಾಕಿದರೆ, ಕಿರಿಯ (ಅಕ್ಬರುದ್ದೀನ್ ಓವೈಸಿ) ಮತ್ತು ಹಿರಿಯ (ಅಸಾದುದ್ದೀನ್ ಓವೈಸಿ) ಎಲ್ಲಿಂದ ಬಂದರು ಮತ್ತು ಎಲ್ಲಿಗೆ ಹೋದರು ಎಂದು ತಿಳಿಯುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಅಕ್ಬರುದ್ದೀನ್ ಅವರ ಹಿಂದಿನ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ ನವನೀತ್ ರಾಣಾ ಅವರು ವಾಗ್ದಾಳಿ ನಡೆಸಿದರು. ಇದೇ ವೇಳೆ ಅವರು ಹೈದರಾಬಾದ್ ಪಾಕಿಸ್ತಾನವಾಗದಂತೆ ತಡೆಯಲು ಈ ಚುನಾವಣೆ ನಿರ್ಣಾಯಕವಾಗಿದೆ. ಮತದಾನ ರಾಷ್ಟ್ರದ ಹಿತಾಸಕ್ತಿಯಿಂದ ಕೂಡಿರಬೇಕು. ನೀವು ಮಾಧವಿ ಲತಾ ಅವರಿಗೆ ಮತ ನೀಡಿ ಆಯ್ಕೆ ಮಾಡಿ. ಆಕೆ ನಮ್ಮ ಸಿಂಹಿಣಿ, ಸಂಸತ್ತಿನಲ್ಲಿ ನಮ್ಮನ್ನು ಪ್ರತಿನಿಧಿಸಬೇಕು. ಈ ಬಾರಿ ಮತದಾನವು ಹೈದರಾಬಾದ್‌ನ ಎಲ್ಲಾ ಹಿಂದೂಗಳನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ ಎಂದರು. ಹೈದರಾಬಾದ್ ನಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಮಾಧವಿ ಲತಾರನ್ನು ಕಣಕ್ಕಿಳಿಸಿದೆ.