ಬೆಂಗಳೂರು: ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಇಡ್ಲಿ ಗುರು ಕಂಪನಿ ಮಾಲೀಕ ಕಾರ್ತಿಕ್ ಶೆಟ್ಟಿಯನ್ನು ಬಂಧಿಸಲಾಗಿದೆ.
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂಬೈನಲ್ಲಿ ಕಾರ್ತಿಕ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಂಚನೆಗೊಳದ ಚೇತನ್ ಎಂಬುವರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ತಿಕ್ ಶೆಟ್ಟಿ, ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಸೇರಿ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಕಾರ್ತಿಕ್ ಶೆಟ್ಟಿಯನ್ನು ಮುಂಬೈನಲ್ಲಿ ವಶಕ್ಕೆ ಪಡೆಯಲಾಗಿದೆ. ಇಡ್ಲಿ ಗುರು ಹೆಸರಲ್ಲಿ ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ಕಾರ್ತಿಕ್ ಶೆಟ್ಟಿ ಜಾಹೀರಾತು ನೀಡಿದ್ದು, ಇದನ್ನು ನಂಬಿದ ಜನ ತಲಾ ಮೂರು ಲಕ್ಷ ರೂ. ಪಾವತಿಸಿದ್ದರು. ಕೆಲವರಿಗೆ ಇಡ್ಲಿ ಗುರು ಫುಡ್ ಗಾಡಿ ನೀಡಿ ಮಾರಾಟದ ಮೇಲೆ ಕಮಿಷನ್ ಪಡೆಯುತ್ತಿದ್ದರಿಂದ ಫ್ರಾಂಚೈಸಿ ಪಡೆದವರಿಗೆ ಹೆಚ್ಚು ಆದಾಯ ಬರುತ್ತಿರಲಿಲ್ಲ. ಠೇವಣಿ ಹಣ ವಾಪಸ್ ಕೇಳಿದಾಗ ಕೊಡದೆ ಕಾರ್ತಿಕ್ ವಂಚಿಸಿದ್ದ. ಹೀಗಾಗಿ ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.