ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸ್ವಯಂ ನಿವೃತ್ತಿ ಪಡೆದ 24 ಗಂಟೆಗಳಲ್ಲೇ ಮಾಜಿ ಐಎಎಸ್ ಅಧಿಕಾರಿ ವಿ.ಕೆ. ಪಾಂಡಿಯನ್ ಅವರನ್ನು 5 ಟಿ(ಪರಿವರ್ತನಾ ಉಪಕ್ರಮ) ಮತ್ತು “ನಬಿನ್ ಒಡಿಶಾ” ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಮೂಲಕ ನವೀನ್ ಪಟ್ನಾಯಕ್ ನೇತೃತ್ವದ ಆಡಳಿತವು ಪಾಂಡಿಯನ್ ಅವರಿಗೆ ಕ್ಯಾಬಿನೆಟ್ ಸಚಿವ ಶ್ರೇಣಿಯಲ್ಲಿ ನೇಮಕ ಮಾಡಿದೆ.
ವಿ.ಕೆ. ಪಾಂಡಿಯನ್ ಅವರನ್ನು 5ಟಿ(ಪರಿವರ್ತನಾ ಉಪಕ್ರಮಗಳು) ಅಧ್ಯಕ್ಷರಾಗಿ ಮತ್ತು ‘ನಬಿನ್ ಒಡಿಶಾ’ ಕ್ಯಾಬಿನೆಟ್ ಸಚಿವ ಶ್ರೇಣಿಯಲ್ಲಿ ನೇಮಕ ಮಾಡಲಾಗಿದೆ. ಪಾಂಡಿಯನ್ ಅವರು ನೇರವಾಗಿ ಮುಖ್ಯಮಂತ್ರಿ ಅಡಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ಪಾಂಡಿಯನ್ ರಾಜಕೀಯ ಲಾಭಕ್ಕಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಮುಖ್ಯಮಂತ್ರಿಯವರ ಆಪ್ತ ಸಲಹೆಗಾರರಾಗಿದ್ದ ಅವರು ಕ್ರಮೇಣವಾಗಿ ಪ್ರಾಮುಖ್ಯತೆಗೆ ಏರುತ್ತಿರುವುದು ಅವರನ್ನು ವಿವಾದಕ್ಕೆ ಸಿಲುಕಿಸಿದೆ.
ವಿ.ಕೆ.ಪಾಂಡಿಯನ್ ಅವರು ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿದ್ದು, ಜನರಿಗೆ ಅನುಕೂಲವಾಗುವ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.