ಬೆಂಗಳೂರು : ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ ಎಂದು ಎಮ್ ಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪರ ಬ್ಯಾಟ್ ಬೀಸಿದ ಎಮ್ ಎಲ್ ಸಿ ವಿಶ್ವನಾಥ್ ‘ ಒಂದು ವೇಳೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ , ಇಬ್ರಾಹಿಂ ಸರಿಯಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದರು.
ಸಿಎಂ ಇಬ್ರಾಹಿಂ ಅವರ ನಿಲುವು ಸರಿಯಾಗಿದೆ.ಸಿಎಂ ಇಬ್ರಾಹಿಂಗೆ ಉಚ್ಚಾಟನೆ ಮಾಡುವ ಅಧಿಕಾರ ಇದೆ. ಮೈತ್ರಿಯ ಮೂಲಕ ಕುಮಾರಸ್ವಾಮಿ ಅವರು ಜಾತ್ಯತೀತ ಅನ್ನೋ ಅರ್ಥವನ್ನೇ ತೆಗೆದುಹಾಕಿಬಿಟ್ಟಿದ್ದಾರೆ ಎಂದು ಎಮ್ ಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.
ಇಬ್ರಾಹಿಂ ಹೇಳಿದ್ದೇನು..?
ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಾಯಕತ್ವದ ನಿರ್ಧಾರದಿಂದ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೆಡಿಎಸ್ ಒರಿಜಿನಲ್ ನಮ್ಮದೇ , ನಾವು ಬಿಜೆಪಿಗೆ ಸಪೋರ್ಟ್ ಮಾಡಲ್ಲ ನಾವು ಕಾಂಗ್ರೆಸ್ ಗೆ ಬೆಂಬಲ ನೀಡುತ್ತೇವೆ ಎಂದು ಸಿ.ಎಂ ಇಬ್ರಾಹಿಂ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಲವಾರು ಎಂಎಲ್ ಗಳು ನನ್ನ ಜೊತೆ ಇದ್ದಾರೆ, ಬಿಜೆಪಿಯನ್ನು ಸೋಲಿಸಬೇಕಿದೆ, ನಾನು ಪ್ರತ್ಯೇಕವಾಗಿ ಕೋರ್ ಕಮಿಟಿಯನ್ನು ರಚನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಸೆಡ್ಡು ಹೊಡೆದಿದ್ದರು.
ಕುಮಾರಸ್ವಾಮಿ ಖಡಕ್ ರಿಯಾಕ್ಷನ್
ಸಿ.ಎಂ.ಇಬ್ರಾಹಿಂ ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಉಚ್ಚಾಟನೆಯಾದರೂ ಮಾಡಲಿ ಏನಾದರೂ ಮಾಡಿಕೊಳ್ಳಲಿ ಅವರಿಗೆ ಬಿಟ್ಟಿದ್ದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾವು ಎಲ್ಲವನ್ನೂ ಸರಿ ಮಾಡುತ್ತೇವೆ. ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.