ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿಸಿದ್ದರೆಂಬ ಆರೋಪದ ಮೇಲೆ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಈಗ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ನೇರವಾಗಿ ತಮ್ಮ ತಂದೆ ಎಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿದ್ದ ರೇವಣ್ಣ, ಇದೀಗ ಟೆಂಪಲ್ ರನ್ ನಡೆಸಿದ್ದಾರೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ನಾನೇನು ತಪ್ಪು ಮಾಡಿಲ್ಲ, ಎಲ್ಲವನ್ನು ಆ ದೇವರು ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
ನಾನು ಎಲ್ಲವನ್ನು ಆ ದೇವರಿಗೆ ಬಿಟ್ಟಿದ್ದೇನೆ. ಕಾನೂನಿನ ಮೇಲೆ ಅಪಾರ ಗೌರವವಿದ್ದು, ಕಾನೂನು ರೀತಿಯಲ್ಲಿಯೇ ಹೋರಾಡುತ್ತೇನೆ ಎಂದು ಹೇಳಿದ ರೇವಣ್ಣ, ಎಸ್ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.