
ಪಂಜಾಬ್ ನ ಖರಾರ್ ನಲ್ಲಿ ನಕಲಿ ಆಸ್ತಿ ದಾಖಲೆ ನೀಡಿ 30 ಕೋಟಿ ರೂ. ಸಾಲ ಪಡೆದು ವಂಚಿಸಿದ ದಂಪತಿಯನ್ನು ಬಂಧಿಸಲಾಗಿದೆ.
ಬ್ಯಾಂಕ್ ಗಳಿಂದ ಸಾಲ ಪಡೆಯಲು ಬಳಸಿದ ಆಸ್ತಿ ದಾಖಲೆಗಳನ್ನು ನಕಲಿ ಮಾಡಿ 30 ಕೋಟಿ ರೂಪಾಯಿಗಳ ವಂಚನೆ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ, ಪೊಲೀಸರು ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.
ಬಿಲ್ಡರ್ ಗುರುಮುಖ್ ಸಿಂಗ್ ಅವರು ವಿದೇಶದಲ್ಲಿ(ಯುನೈಟೆಡ್ ಸ್ಟೇಟ್ಸ್) ವಾಸಿಸುತ್ತಿದ್ದು, ಅವರ ಕಂಪನಿಗೆ ಕೇರ್ ಟೇಕರ್ ಆಗಿ ತಮ್ಮ ಸಂಬಂಧಿಕರನ್ನು ನೇಮಿಸಿಕೊಂಡಿದ್ದರು. ಆದರೆ, ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ನನ್ನ ಆಸ್ತಿಯ ನಕಲಿ ದಾಖಲೆಗಳನ್ನು ತಯಾರಿಸಿ ಆಸ್ತಿಯ ವಿರುದ್ಧ ಕೋಟಿಗಟ್ಟಲೆ ಸಾಲ ಪಡೆದು ಹಣವನ್ನು ತಮ್ಮ ನಡುವೆ ಹಂಚಿಕೊಂಡಿದ್ದಾರೆ ಎಂದು ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ. ಗುರುಮುಖ್ ಸಿಂಗ್ ಹೇಳಿಕೆ ಆಧರಿಸಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಸಬ್ ಇನ್ಸ್ ಪೆಕ್ಟರ್ ನರೀಂದರ್ ಸಿಂಗ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿದ ನಂತರ, ಪತಿ ಮತ್ತು ಪತ್ನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.