ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಅನಾಥಾಶ್ರಮವೊಂದರಲ್ಲಿ ವಾಸವಾಗಿರುವ ಸುಮಾರು 21 ಮಕ್ಕಳು ಸಂಸ್ಥೆಯ ಸಿಬ್ಬಂದಿಯಿಂದ ಕಿರುಕುಳ ಮತ್ತು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯುಸಿ) ನಡೆಸಿದ ಅನಿರೀಕ್ಷಿತ ತಪಾಸಣೆಯಲ್ಲಿ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ.
ತಲೆಕೆಳಗಾಗಿ ನೇತುಹಾಕುವುದು, ಕಾದ ಕಬ್ಬಿಣದಿಂದ ಬರೆ ಹಾಕುವುದು ಮತ್ತು ಬಟ್ಟೆ ಬಿಚ್ಚಿದ ನಂತರ ಛಾಯಾಚಿತ್ರ ತೆಗೆಯುವುದು ಸೇರಿದಂತೆ ಸಣ್ಣಪುಟ್ಟ ತಪ್ಪುಗಳಿಗಾಗಿ ಮಕ್ಕಳು ಹಿಂಸೆಗೆ ಒಳಗಾದ ನಿದರ್ಶನಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಇದಲ್ಲದೆ, ಶಿಕ್ಷೆಯ ರೂಪವಾಗಿ ಕೆಂಪು ಮೆಣಸಿನಕಾಯಿಯನ್ನು ಸುಡುವುದರಿಂದ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸಲಾಯಿತು ಎಂದು ಮಕ್ಕಳು ಹೇಳಿದ್ದಾರೆ.
ಅನಾಥಾಶ್ರಮದ ಐವರು ಉದ್ಯೋಗಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಲಾಗಿದ್ದು, ಪ್ರಸ್ತುತ ಸಮಗ್ರ ತನಿಖೆ ನಡೆಯುತ್ತಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಒಂದು ಆಘಾತಕಾರಿ ಘಟನೆಯು ನಾಲ್ಕು ವರ್ಷದ ಮಗುವನ್ನು ಬಾತ್ರೂಮ್ ನಲ್ಲಿ ಕೂಡಿ ಹಾಕಲಾಗಿದೆ. ಅವನ ಪ್ಯಾಂಟ್ ಮಣ್ಣಾಗಿದ್ದಕ್ಕೆ ದೀರ್ಘಕಾಲದವರೆಗೆ ಆಹಾರ ಕೊಟ್ಟಿಲ್ಲ ಎಂದು ಹೇಳಲಾಗಿದೆ. ವಾತ್ಸಲ್ಯಪುರಂ ಜೈನ್ ಟ್ರಸ್ಟ್ ನಡೆಸುತ್ತಿರುವ ಅನಾಥಾಶ್ರಮವು ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿಲ್ಲ ಎಂಬುದು ಬಹಿರಂಗವಾಗಿದೆ. ಟ್ರಸ್ಟ್ ಬೆಂಗಳೂರು, ಸೂರತ್, ಜೋಧ್‌ಪುರ ಮತ್ತು ಕೋಲ್ಕತ್ತಾದಲ್ಲಿ ಇದೇ ರೀತಿ ಆಶ್ರಯ ತಾಣಗಳನ್ನು ನಿರ್ವಹಿಸುತ್ತದೆ.
ಇಂದೋರ್‌ನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಮರೇಂದ್ರ ಸಿಂಗ್, ಸಿಇಸಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅನಾಥಾಶ್ರಮವನ್ನು ತಕ್ಷಣವೇ ಮುಚ್ಚಲಾಯಿತು. ಮಕ್ಕಳನ್ನು ಸರ್ಕಾರಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಯಿತು. ತನಿಖಾ ತಂಡವು ಪರಿಶೀಲನೆ ನಡೆಸಿದೆ. ಅನಾಥರು ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದಿಂದ ಬಂದವರು ಎಂದು ತಿಳಿಸಿದ್ದಾರೆ.