
ಆದರೆ ಈ ರೀತಿಯ ಯೋಚನೆಗಳು ಕೇವಲ ನಿಮ್ಮ ಮನಃಶ್ಶಾಂತಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ಖಿನ್ನತೆ ಸೇರಿದಂತೆ ವಿವಿಧ ರೀತಿಯ ಮಾನಸಿಕ ಅನಾರೋಗ್ಯವನ್ನು ತಂದೊಡ್ಡಬಹುದು ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
ನೀವು ಅತಿಯಾಗಿ ಯೋಚಿಸುತ್ತಿರುವಾಗ ನಿಮ್ಮ ಮನಸ್ಸಿನಲ್ಲಿ ನಿರಂತರ ಆಲೋಚನೆಗಳ ಸುರುಳಿ ಸೃಷ್ಟಿಯಾಗುತ್ತದೆ. ಅದೊಂದು ಸಣ್ಣ ಸಮಸ್ಯೆಯಾಗಿದ್ದರೂ ಆ ಕ್ಷಣಕ್ಕೆ ನಿಮಗೆ ಅದು ದೊಡ್ಡ ವಿಷಯ ಎನಿಸಬಹುದು. ನಿಮ್ಮ ಮನಸ್ಸು ಸೃಷ್ಟಿಸಿರುವ ಆಲೋಚನೆಗಳ ಸುರುಳಿಯಿಂದ ಹೊರಬರಲು ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
ಅತಿಯಾದ ಯೋಚನೆಯಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಅಪಾಯವಿದೆ. ಇದೊಂದು ಮಾನಸಿಕ ಅಸ್ವಸ್ಥತೆ ಅಲ್ಲದೇ ಇದ್ದರೂ ಸಹ ನೀವು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ಇದು ಹೆಚ್ಚಿಸಬಹುದು.
ನೀವು ಖಿನ್ನತೆಗೆ ಒಳಗಾಗುತ್ತೀರಿ :
ಅತಿಯಾಗಿ ಯೋಚನೆ ಮಾಡುವವರು ಯಾವಾಗಲು ಖಿನ್ನತೆಯಲ್ಲಿಯೇ ಇರುತ್ತಾರೆ. ಹಿಂದಿನ ಯಾವುದೋ ಘಟನೆ ಅಥವಾ ಪ್ರಸ್ತುತ ಘಟನೆಗಳ ಬಗ್ಗೆ ಚಿಂತಿತರಾಗಿರುತ್ತೇವೆ. ಭವಿಷ್ಯದ ಬಗ್ಗೆ ಅತಿಯಾದ ಯೋಚನೆಗಳು ಆರಂಭವಾಗುತ್ತವೆ. ಇವೆಲ್ಲದರಲ್ಲೂ ನಿಮಗೆ ನಕರಾತ್ಮಕ ಅಂಶಗಳೇ ಕಾಣಲು ಆರಂಭಿಸುತ್ತದೆ. ಇದರಿಂದ ನಿಮಗೆ ಹತಾಶ ಭಾವ, ಯಾವುದೇ ವಿಚಾರಗಳಲ್ಲಿ ಆಸಕ್ತಿಯೇ ಇಲ್ಲದಂತೆ ಆಗುತ್ತದೆ.
ಜನರಿಂದ ದೂರ ಇರಲು ಬಯಸುತ್ತೀರಿ :
ಅತಿಯಾಗಿ ಯೋಚನೆ ಮಾಡುವವರು ಹೆಚ್ಚಾಗಿ ಜನರಿಂದ ದೂರ ಇರಲು ಬಯಸುತ್ತಾರೆ. ಒಬ್ಬಂಟಿಯಾಗಿ ಏನನ್ನೋ ಯೋಚಿಸುತ್ತಾರೆ. ಇದು ಬಹಳ ಕಾಲದವರೆಗೆ ಮುಂದುವರಿದರೆ ನಿಮಗೆ ಸಾಮಾಜಿಕ ಜೀವನದಲ್ಲಿ ಬೆರೆಯಲು ಸಾಧ್ಯವಾಗುವುದೇ ಇಲ್ಲ.
ನಿಮ್ಮ ದೈನಂದಿನ ಚಟುವಟಿಕೆಗಳು ಕುಂಠಿತಗೊಳ್ಳುತ್ತದೆ :
ಅತಿಯಾದ ನಕರಾತ್ಮಕ ಯೋಚನೆಗಳು ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ನೀವು ಸರಿಯಾಗಿ ನಿದ್ರೆ ಮಾಡುವುದಿಲ್ಲ, ಊಟ ಕೂಡ ಸರಿಯಾಗಿ ಆಗುವುದಿಲ್ಲ. ಯಾವಾಗ ಈ ಅತಿಯಾದ ಯೋಚನೆಗಳು ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೋ ಆಗ ನಿಜವಾದ ಸಮಸ್ಯೆ ಆರಂಭವಾಗುತ್ತದೆ.
ಸಮಯ ವ್ಯರ್ಥ ಮಾಡುತ್ತೀರಿ :
ಅತಿಯಾದ ಯೋಚನೆಗಳು ಯಾವುದೇ ರೀತಿಯಲ್ಲೂ ನಿಮಗೆ ಏಳ್ಗೆ ತಂದುಕೊಡುವುದಿಲ್ಲ. ಬದಲಾಗಿ ನಿಮ್ಮ ಸಮಯ ಹಾಗೂ ಶಕ್ತಿ ವ್ಯಯವಾಗುತ್ತದೆ. ಅಂತಿಮವಾಗಿ ನಿಮ್ಮ ಮನಃಸ್ಥಿತಿ ಕೂಡ ಹಾಳಾಗುತ್ತದೆ.
ನೀವು ಕೂಡ ಅತಿಯಾದ ಯೋಚನೆಗಳಿಗೆ ಒಳಗಾಗುವವರಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲ ಎಂದೇನಿಲ್ಲ. ನಿಮ್ಮ ಸಮಸ್ಯೆ ಬಗ್ಗೆ ತಿಳಿದುಕೊಳ್ಳುವುದೇ ಇದಕ್ಕೆ ಮೊದಲ ಪರಿಹಾರವಾಗಿದೆ.
ನಿಮ್ಮ ಯೋಚನಾ ಲಹರಿಯ ಬಗ್ಗೆ ಗಮನ ಕೊಡಿ. ಆಗಿದ್ದು ಆಯ್ತು ಎಂದು ನಿಮಗೆ ಸಮಾಧಾನ ಮಾಡಿಕೊಂಡು ಮುನ್ನುಗ್ಗಲು ಯತ್ನಿಸಿ.
ದೀರ್ಘವಾಗಿ ಉಸಿರು ಎಳೆದುಕೊಂಡು ಮನಸ್ಸಿಗೆ ಶಾಂತಿ ತಂದುಕೊಳ್ಳುವ ಮೂಲಕ ನೀವು ಇದರಿಂದ ಹೊರ ಬರಬಹುದು.
ಯಾವುದಾದರೊಂದು ಕೆಲಸದಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.
ವರ್ತಮಾನದಲ್ಲಿ ಬದುಕಲು ಕಲಿತಷ್ಟೂ ಗತಕಾಲದ ನೆನಪುಗಳು ತಲೆಯಲ್ಲಿ ಇರೋದಿಲ್ಲ. ಜೀವನವನ್ನು ಸಕಾರಾತ್ಮಕವಾಗಿ ನೋಡಲು ಆರಂಭಿಸಿ.