
ಬೆಂಗಳೂರು: ದಿನದ 24 ಗಂಟೆ ಹೋಟೆಲ್ ತೆರೆಯಲು ಅನುಮತಿ ನೀಡುವಂತೆ ಕೋರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೋಟೆಲ್ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಗಿದೆ.
ಸಂಘದ ಪದಾಧಿಕಾರಿಗಳ ನಿಯೋಗ ಡಿಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವಂತೆ ಕೋರಲಾಗಿದೆ. ಅವಿದ್ಯಾವಂತರಿಗೆ ಉದ್ಯೋಗ, ರೈತರು ಬೆಳೆದ ಪದಾರ್ಥಗಳ ಹೆಚ್ಚಿನ ಖರೀದಿ, ಜನಸಾಮಾನ್ಯರಿಗೆ ಉಚಿತವಾಗಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳನ್ನು ಹೋಟೆಲ್ ಗಳು ಒದಗಿಸುತ್ತಿವೆ. ಅಪರೂಪದ ವಿಶೇಷ ಉದ್ಯಮ ಇದಾಗಿದ್ದು, ಕೈಗಾರಿಕಾ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ಹೋಟೆಲ್ ಉದ್ಯಮ ಬೆಳವಣಿಗೆಗೆ ಸಹಕರಿಸಬೇಕೆಂದು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಡಿಸಿಎಂಗೆ ಮನವಿ ಮಾಡಿದ್ದಾರೆ.