7 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶವಾಗಾರ ನಿರ್ವಾಹಕ ಸೇರಿ ಸೇವಾನಿರತರಿಗೆ ಸನ್ಮಾನ

ಬಳ್ಳಾರಿ: ಸುಮಾರು 7 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶವಾಗಾರ ನಿರ್ವಾಹಕ ಅಂದ್ರಯ್ಯ, ಅಂಗನವಾಡಿ ಕಾರ್ಯಕರ್ತೆ ಮಹಾಲಕ್ಷ್ಮಿ, ಆರೋಗ್ಯ ಇಲಾಖೆಯ ಡಿ. ಸುನಿತಾ, ತ್ಯಾಜ್ಯ ನಿರ್ವಹಣೆ ಮಾಡುವ ಶ್ರೀನಿವಾಸುಲು, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು ಹೀಗೆ ಸುಮಾರು 23 ವಿವಿಧ ಕ್ಷೇತ್ರಗಳಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಸಮಾಜದ ಕೆಳಹಂತದ ಸೇವಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಅರ್ಥಪೂರ್ಣ ಕಾರ್ಯಕ್ರಮವನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರಮದಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವಾ ಕೊಡುಗೆ ನೀಡುತ್ತಿರುವ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮವನ್ನು ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಮುದಾಯ ಸೇವೆಯಲ್ಲಿ ತೊಡಗಿರುವ ವಿಶ್ವವಿದ್ಯಾಲಯೇತರ ವ್ಯಕ್ತಿಗಳನ್ನು ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯವು ಗುರುತಿಸಿ ಗೌರವಿಸುತ್ತಿದೆ. ಗಾಂಧೀಜಿಯವರ ಆಶಯದಂತೆ ಸೌಲಭ್ಯ ವಂಚಿತ ವರ್ಗದ ಸಿಬ್ಬಂದಿಯನ್ನು ಗೌರವಿಸುವ ಪರಿಪಾಠಕ್ಕೆ ವಿವಿಯು ನಾಂದಿ ಹಾಡಿದೆ. ತಮ್ಮ ಸೇವೆಯಲ್ಲಿ ಬದ್ಧತೆ ಪ್ರದರ್ಶಿಸುವ ವಿವಿಧ ಸೇವಾ ವಲಯದ ನೌಕರರಿಗೆ ವಿವಿ ವತಿಯಿಂದ ಮುಂಬರುವ ದಿನಗಳಲ್ಲಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.

ಕುಲಸಚಿವರಾದ ರುದ್ರೇಶ್ ಎಸ್.ಎನ್. ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯು ದೇಶದ ಆಸ್ತಿಯಾಗಿದ್ದು, ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಮಹಾತ್ಮ ಗಾಂಧೀಯವರ ಕನಸನ್ನು ನನಸು ಮಾಡುವ ಸಣ್ಣ ಪ್ರಯತ್ನಕ್ಕೆ ವಿವಿಯು ಇಂದು ಪ್ರಯತ್ನಿಸಿದೆ. ಕಾಯಕವೇ ಕೈಲಾಸ ಎಂದು ನಂಬಿರುವ ಎಲ್ಲ ಸೇವಾನಿರತ ವ್ಯಕ್ತಿಗಳನ್ನು ನಾವೆಲ್ಲ ಗೌರವಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಎಂ ವಾಣಿ, ಆರೋಗ್ಯ ಇಲಾಖೆಯ ಜಗನ್ನಾಥ, ಹಮಾಲಿ ಮಾಡುವ ಲಕ್ಷ್ಮಿ ನಾರಾಯಣ, ಕೆಎಸ್‌ಆರ್‌ಟಿಸಿ ಚಾಲಕರಾದ ಅಶೋಕ್, ದಾದಾಪೀರ್, ಪೌರಕಾರ್ಮಿಕ ಹನುಮಂತಪ್ಪ, ಪೋಸ್ಟ್ ಮನ್ ಮೌನೇಶ್, ಆಟೋ ಚಾಲಕ ನಾಗರಾಜ್‌ ರಾವ್, ಕೂಲಿ ಕಾರ್ಮಿಕ ಚಂದ್ರಶೇಖರ್, ಆಶಾ ಕಾರ್ಯಕರ್ತೆ ರತ್ನಮ್ಮ, ಧೋಬಿಯಾದ ಜಮನಮ್ಮ, ಮನೆ ಕೆಲಸಗಾರರಾದ ಪದ್ಮಾವತಿ, ಹಾಲು ಮಾರುವ ಮಹೇಶ್, ಹೂ ಮಾರಾಟಗಾರ ಲೋಕಪ್ಪ, ದಿನಪತ್ರಿಕೆ ವಿತರಕ ಸತೀಶ್, ಜಿಲ್ಲಾ ಆಸ್ಪತ್ರೆಯ ಸಿದ್ಧಯ್ಯ, ಅಭಿನಂದನ್, ಟೈಲರ್ ಕೃಷ್ಣರಾವ್ ಹಾಗೂ ಕೆಇಬಿ ಲೈನ್‌ಮನ್‌ಗಳನ್ನು ಸನ್ಮಾನಿಸಲಾಯಿತು.

ಸನ್ಮಾನದ ನಂತರ ಕೆಲವು ಸನ್ಮಾನಿತರು ತಮ್ಮ ಅನಿಸಿಕೆ ಹಂಚಿಕೊಂಡು ಭಾವುಕರಾದರು.

ಸಮಾಜದಲ್ಲಿ ಕೆಳಹಂತದ ಸೇವೆಯಲ್ಲಿದ್ದರೂ ನಮ್ಮನ್ನು ಗೌರವಿಸಿದ ವಿಶ್ವವಿದ್ಯಾಲಯಕ್ಕೆ ಆಭಾರಿಯಾಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಂಗನಾಥ್ ಮತ್ತು ರಾಘವೇಂದ್ರ ಗುಡದೂರ ಅವರ ತಂಡದಿಂದ ಗಾಂಧಿ ನಮನ ಸಂಗೀತ ಗೋಷ್ಠಿ ನಡೆಯಿತು.

ಎನ್‌ಎಸ್‌ಎಸ್ ಸಂಯೋಜಕರಾದ ಡಾ ಕುಮಾರ್ ವೇದಿಕೆಯಲ್ಲಿದ್ದರು. ಡಾ. ಶಶಿಧರ್ ಕೆಲ್ಲೂರ್ ನಿರೂಪಿಸಿ ವಂದಿಸಿದರು. ವಿವಿಯ ಬೋಧಕ ಬೋಧಕೇತರ ಸಿಬ್ಬಂದಿ ಮುಂಜಾನೆ 6-9 ಗಂಟೆವರೆಗೆ ನಿರಂತರ ಶ್ರಮದಾನ ನಿರ್ವಹಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read