
ಬೆಂಗಳೂರು: ಗೃಹ ಇಲಾಖೆ ಸಭೆಯಲ್ಲಿ ಒಂದು ವರ್ಷದ ನಿರ್ವಹಣೆ ಬಗ್ಗೆ ಅವಲೋಕನ ನಡೆಸಲಾಗಿದೆ ಎಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇಲಾಖೆಗೆ ಸಂಬಂಧಿಸಿದ ವಿಧೇಯಕಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಗೃಹ ಇಲಾಖೆಗೆ ಅಗತ್ಯವಿರುವ ಹೊಸ ವಾಹನಗಳ ಖರೀದಿ ಹಾಗೂ ಡ್ರೋನ್ ನಿರ್ವಹಣೆ ತರಬೇತಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 2022 ರಲ್ಲಿ ಗೃಹ ಇಲಾಖೆಗೆ ಬಹಳ ಸವಾಲುಗಳು ಎದುರಾಗಿತ್ತು. ಗೃಹ ಸಚಿವನಾಗಿ ಪೊಲೀಸರ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆ. ಚುನಾವಣೆ ವರ್ಷದಲ್ಲಿ ವಿಶೇಷ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ. ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಈ ಬಗ್ಗೆ ಗಮನಿಸಿ ವರದಿ ತರಿಸಿಕೊಳ್ಳುತ್ತೇನೆ. ಈ ಕುರಿತು ದೂರು ನೀಡಿದರೆ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ.