ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್‌ನ ಕೊನೆಯ ದಿನದಂದು ಕಮಲಾ ಹ್ಯಾರಿಸ್, ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ. ನವೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಕಮಲಾ ಹ್ಯಾರಿಸ್ ಹೆಸರು ಇತಿಹಾಸ ಪುಟ ಸೇರಲಿದೆ. ಈ ಸಾಧನೆ ಮಾಡಿದ ಭಾರತೀಯ ಮೂಲದ ಮೊದಲ ಅಮೇರಿಕನ್ ಪ್ರಜೆಯಾಗಲಿದ್ದಾರೆ.
ಅಮೆರಿಕಾದ ಕೆಲವು ಹಿಂದೂಗಳು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗಾಗಿ ʼಹಿಂದೂ ಫಾರ್ ಕಮಲಾ ಹ್ಯಾರಿಸ್ʼ ಎಂಬ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಕಮಲಾ ಹ್ಯಾರಿಸ್, ಭಾರತ, ಅಮೇರಿಕಾ ಮತ್ತು ಜಗತ್ತಿಗೆ ಒಳ್ಳೆಯದನ್ನು ಮಾಡಲಿದ್ದಾರೆ ಎಂದು ಹಿಂದೂ ಪ್ರಚಾರಕರ ಅಭಿಪ್ರಾಯವಾಗಿದೆ.
ಕಮಲಾ ದೇವಿ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್‌ನ 47 ನೇ ಅಧ್ಯಕ್ಷರಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿಯೇ ʼಹಿಂದೂ ಫಾರ್ ಕಮಲಾ ಹ್ಯಾರಿಸ್ʼ ಶುರು ಮಾಡಿದ್ದೇವೆ ಎಂದು ಗುಂಪಿನ ಸಂಸ್ಥಾಪಕರು ಹೇಳಿದ್ದಾರೆ.
ಗುರುವಾರ ಅಮೆರಿಕದ ಕಾಲಮಾನದ ಪ್ರಕಾರ, ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನವನ್ನು ಔಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ಅಮೇರಿಕನ್-ಹಿಂದೂಗಳಿಗೆ ಚುನಾವಣೆಯಲ್ಲಿ ಮತ ಹಾಕುವಂತೆ ಈ ಗುಂಪು ಒತ್ತಾಯಿಸುತ್ತಿದೆ. ಅವರ ಮನೆಗಳ ಬಳಿ ಹೋಗಿ ಬೆಂಬಲದ ಚಿಹ್ನೆಗಳನ್ನು ಪ್ರದರ್ಶಿಸುತ್ತಿದೆ. ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರಕ್ಕೆ ಬೆಂಬಲವಾಗಿ ದೇಣಿಗೆ ಪಡೆಯುತ್ತಿದೆ ಎಂದು ಗುಂಪಿನ ಸದಸ್ಯರು ಹೇಳಿದ್ದಾರೆ.