ಮಂಗಳೂರು: ಸುಪ್ರೀಂ ಕೋರ್ಟ್ ಈ ಹಿಂದೆ ಸಲಹೆ ನೀಡಿದಂತೆ ಸರ್ಕಾರದ ಕಪಿಮುಷ್ಠಿಯಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಬೇಕು ಎಂದು ಉಡುಪಿ ಪೇಜಾವರ ಮಠಾಧೀಶ, ಅಯ್ಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಸ್ಥ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಶ್ರೀಗಳು, ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ ಹಿಂದೂಗಳ ಸುಪರ್ದಿಗೆ ನೀಡಬೇಕು. ಅಯೋಧ್ಯೆ ಮಾದರಿಯಲ್ಲಿ ಪ್ರತ್ಯೇಕ ವಿಶ್ವಸ್ಥ ಮಂಡಳಿ ರಚಿಸಬೇಕು ಎಂದು ಹೇಳಿದ್ದಾರೆ.
ಇತರೆ ಧರ್ಮಿಯರ ಆರಾಧನಾ ಸ್ಥಳನಗಳು ಅವರದೇ ಹಿಡಿತದಲ್ಲಿ ಇವೆ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ದೇವಾಲಯಗಳನ್ನು ಹಿಂದೂಗಳ ಪೂರ್ಣ ಹಿಡಿತಕ್ಕೆ ನೀಡಲು ಸಾಧ್ಯವಾಗಿಲ್ಲ. ಸರ್ಕಾರದ ಕಪಿಮುಷ್ಠಿಯಿಂದ ದೇವಾಲಯಗಳನ್ನು ಮುಕ್ತಗೊಳಿಸಬೇಕು. ಹಿಂದೂಗಳೇ ಶ್ರದ್ಧಾ ಕೇಂದ್ರಗಳನ್ನು ನಡೆಸಿದರೆ ಯಾವತ್ತೂ ಅಪಚಾರ ನಡೆಸಲು ಅವಕಾಶವಿಲ್ಲ. ದೇವಾಲಯಗಳು ಪ್ರತ್ಯೇಕ ವಿಶ್ವಸ್ಥ ಮಂಡಳಿ ರಚಿಸಿ ನೋಡಿಕೊಳ್ಳಬೇಕು ಎಂದರು.
ಪ್ರಾಚೀನ ದೇವಾಲಯಗಳು ಸರ್ಕಾರದ ಸುಪರ್ದಿಯಲ್ಲಿವೆ. ಇದು ಸರಿಯಲ್ಲ, ಲಡ್ಡು ಅಪವಿತ್ರದಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿರುವುದು ಸರ್ಕಾರದ ಕರ್ತವ್ಯ. ಮತ್ತು ಸಂಬಂಧಿಸಿದ ವಿಭಾಗಗಳು ನಿಗಾವಹಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ದೇವಾಲಯಗಳು ಸ್ವಂತ ಗೋಶಾಲೆ ಹೊಂದಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.