ಖಲಿಸ್ತಾನಿ ಪರ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತೀಯ ಏಜೆನ್ಸಿಗಳು ಕಾರಣ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡು ಹೇಳಿಕೆ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಜಸ್ಟಿನ್ ಟ್ರೂಡೋ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಭಾರತ, ಕೆನಡಾ ನಿವಾಸಿಗಳಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಅಲ್ಲದೆ ಭಾರತ ಹಾಗೂ ಕೆನಡಾ ತಮ್ಮ ತಮ್ಮ ರಾಜ ತಾಂತ್ರಿಕ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದು, ಇದರ ಮಧ್ಯೆ ಖಲಿಸ್ತಾನಿ ಪರ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಖಂಡಿಸಿ ಸಿಖ್ಸ್ ಫಾರ್ ಜಸ್ಟೀಸ್ ((SFJ) ಪ್ರತಿಭಟನೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿನ ರಾಜ ತಾಂತ್ರಿಕ ಕಚೇರಿಗಳಲ್ಲಿರುವ ಒಟ್ಟಾವಾ, ಟೊರಾಂಟೋ ಹಾಗೂ ವಾಂಕಾವೂರಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕೆನಡಾ ಫೆಡರಲ್ ಪೊಲೀಸರ ಜೊತೆಗೆ ಸ್ಥಳೀಯ ಪೊಲೀಸರೂ ಸಹ ಭದ್ರತೆಗೆ ನಿಯೋಜನೆಗೊಂಡಿದ್ದು, ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರೂಡೋ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಭಾರತ ಸರ್ಕಾರ ಕೂಡ ಈ ಎಲ್ಲ ಬೆಳವಣಿಗೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಿದೆ.