ಬೆಂಗಳೂರು: ಕಠಿಣ ಕ್ರಮದಿಂದ ಮಕ್ಕಳ ಮನಸ್ಸಿಗೆ ಘಾಸಿ ಉಂಟಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ನೀತಿ ಮರುಪರಿಶೀಲಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಕಠಿಣ ಶಿಸ್ತು ಕ್ರಮ ಜರುಗಿಸುವುದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಶಾಲೆಗಳು ಅಂತಹ ಶಿಸ್ತು ಕ್ರಮ ನೀತಿಯನ್ನು ಪರಿಶೀಲಿಸಬೇಕೆಂದು ಹೇಳಲಾಗಿದೆ.
ಶಾಲೆಗೆ ಮದ್ಯ ತಂದ ಕಾರಣಕ್ಕೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದರಿಂದ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಕೊಡಗಿನ ಶಾಲೆಯೊಂದರ ಪ್ರಾಂಶುಪಾಲೆ, ನಿರ್ದೇಶಕ ಮತ್ತು ಹಾಸ್ಟೆಲ್ ವಾರ್ಡನ್ ವಿರುದ್ಧ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್ ನ್ಯಾಯಪೀಠ ಈ ಸಲಹೆ ನೀಡಿದೆ.
ಶಾಲೆಗಳಲ್ಲಿ ಕೈಗೊಳ್ಳುವ ಕಠಿಣ ಶಿಸ್ತು ಕ್ರಮಗಳಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಶಾಲೆಗಳು ತಮ್ಮ ಪುರಾತನ ಮನಸ್ಥಿತಿ ಬದಲಿಸಿಕೊಳ್ಳಬೇಕು. ಮಕ್ಕಳ ಜೀವಹರಣ ತಪ್ಪಿಸಬೇಕು ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು 15 ನಿಮಿಷದವರೆಗೆ ಶಾಲೆಯ ಜೊತೆ ಸಂಪರ್ಕದಲ್ಲಿದ್ದ. ಶಾಲೆ ಈ ಪ್ರಕರಣದಲ್ಲಿ ತಪ್ಪು ಮುಚ್ಚಿಕೊಳ್ಳಲು ವಿದ್ಯಾರ್ಥಿ ಮೇಲೆ ಆರೋಪ ಹೊರಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ತಲುಪಲು ಶಾಲೆಯ ಸಿಬ್ಬಂದಿ ಪ್ರಚೋದನೆ ನೀಡಿದ್ದಾರೆಯೇ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಲಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಕಠಿಣ ಕ್ರಮದಿಂದ ಮಕ್ಕಳ ಮನಸ್ಸಿಗೆ ಘಾಸಿಯಾಗುವುದರಿಂದ ಶಿಸ್ತು ಕ್ರಮ ನೀತಿಯನ್ನು ಮರುಪರಿಶೀಲಿಸುವಂತೆ ತಿಳಿಸಿದೆ.