
ಬೆಂಗಳೂರು: ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ನೀಡಲು ವಿಫಲವಾಗಿರುವ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನಾಟಕ ನಡೆಯುತ್ತಿದೆಯೇ ಹೊರತೂ ಜನಸಾಮಾನ್ಯರು ಕೇಳುವ ಅಗತ್ಯ ಸೌಲಭ್ಯಗಳಾದ ನೀರು, ರಸ್ತೆ, ಸ್ಮಶಾನ ಕಲ್ಪಿಸುತ್ತಿಲ್ಲ. ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕಳೆದ 75 ವರ್ಷಗಳಿಂದ ಇಂತಹ ನಾಟಕ ನಡೆಯುತ್ತಿದೆ ಹೊರತೂ ಜನಸಾಮಾನ್ಯರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ. ಆದರೆ, ಮೃತಪಟ್ಟ ಕೆಲವರಿಗೆ ಮಾತ್ರ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸಿ ಕೊಡುತ್ತದೆ. ಮತ ಕೇಳುವ ಸರ್ಕಾರ ಎಂದಾದರೂ ಸ್ಮಶಾನದ ಜಾಗವಿದೆಯೇ ಎಂದು ಕೇಳಿದೆಯೇ ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ಸ್ಮಶಾನ ಜಾಗ ಸಂಬಂಧ ಹೈಕೋರ್ಟ್ ಹೊರಡಿಸಿದ ಆದೇಶ ಪಾಲಿಸದ ಕಾರಣ ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಯಾವ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿದೆ ಯಾವ ಗ್ರಾಮದಲ್ಲಿ ಇಲ್ಲ ಎಂಬುದರ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ಮೂರುವಾರ ವಿಚಾರಣೆ ಮುಂದೂಡಿದೆ.
ಗ್ರಾಮಗಳಿಗೆ ಸ್ಮಶಾನ ಜಮೀನು ಕಲ್ಪಿಸಿದ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಜಯರಾಮ್ ಖುದ್ದು ವಿಚಾರಣೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡ, ವಿಜಯನಗರ, ಧಾರವಾಡ, ಗದಗ ಮೊದಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆನ್ಲೈನ್ ಮೂಲಕ ಹಾಜರಾಗಿದ್ದರು. ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸದಿರುವುದು ದುರದೃಷ್ಟಕರ. ಮತ ಕೇಳುವ ಸರ್ಕಾರದಿಂದ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. 75 ವರ್ಷಗಳಿಂದ ಆರೋಪ ಪ್ರತ್ಯಾರೋಪ ಮಾಡಲಾಗುತ್ತಿದೆ ವಿನಃ ಅಭಿವೃದ್ಧಿ ಯಾರಿಗೂ ಬೇಕಿಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.