ಬೆಂಗಳೂರು: ಅನಾಥೆಗೆ ಜೀವನ ಕೊಡುವ ಭರದಲ್ಲಿ ಅಪ್ರಾಪ್ತೆ ಎಂಬುದನ್ನು ನೋಡದೆ ಮದುವೆಯಾಗಿದ್ದ ಕಾರಣ ಪೋಕ್ಸೋ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಗುರಿಯಾಗಿದ್ದ ವ್ಯಕ್ತಿಯ ನೆರವಿಗೆ ಹೈಕೋರ್ಟ್ ಧಾವಿಸಿದೆ. ಅಪ್ರಾಪ್ತೆಯ ಪ್ರಮಾಣ ಪತ್ರ ಆಧರಿಸಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಾಸ್ತಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಮತ್ತು ಕೋಲಾರದ ತ್ವರಿತಗತಿ ನ್ಯಾಯಾಲಯ ಕೈಗೊಂಡಿದ್ದ ಕಾಗ್ನಿಜೆನ್ಸ್ ಪ್ರಶ್ನಿಸಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಿಂದ ಈ ಆದೇಶ ನೀಡಲಾಗಿದೆ.
ಪ್ರಕರಣದಲ್ಲಿ ಅರ್ಜಿದಾರರ ಪತ್ನಿಗೆ ಪೋಷಕರು ಇಲ್ಲ. ಇಡೀ ಕುಟುಂಬಕ್ಕೆ ಅರ್ಜಿದಾರರೇ ಜೀವನಾಧಾರವಾಗಿದ್ದಾರೆ. ಹಾಗಾಗಿ ಪ್ರಕರಣ ಮುಂದುವರಿಸಿದಲ್ಲಿ ಅರ್ಜಿದಾರ, ಮತ್ತವರ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಪ್ರಕರಣದಿಂದ ಅರ್ಜಿದಾರನ ಖುಲಾಸೆ ಮಾಡಬಹುದಾಗಿದೆ ಎಂದು ಖುದ್ದಾಗಿ ಅವರ ಪತ್ನಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೊಂದೇ ಕಾರಣದಿಂದ ಪ್ರಮಾಣ ಪತ್ರ ರದ್ದುಪಡಿಸಲಾಗುತ್ತಿದೆ. ಪ್ರಕರಣ ರದ್ದಾದ ನಂತರ ಪತ್ನಿಯನ್ನು ಸೂಕ್ತ ಕಾರಣವಿಲ್ಲದೆ ಮತ್ತೆ ಅನಾಥೆಯನ್ನಾಗಿ ಮಾಡಿದರೆ ವಿಚಾರಣೆ ಮುಂದುವರಿಸಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
2023ರ ಮೇ 24ರಂದು ಅರ್ಜಿದಾರ ಅನಾಥೆಯಾಗಿದ್ದ ಅಪ್ರಾಪ್ತೆ ಮದುವೆಯಾಗಿದ್ದರು. ಗರ್ಭಿಣಿಯಾಗಿದ್ದ ಆಕೆ ಆಸ್ಪತ್ರೆಗೆ ಹೋದಾಗ 17 ವರ್ಷ 8 ತಿಂಗಳಿಗೆ ಗರ್ಭಿಣಿಯಾಗಿರುವುದು ಗೊತ್ತಾಗಿ, ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಂತರ ಅರ್ಜಿದಾರನನ್ನು ಬಂಧಿಸಿ ವಿಚಾರಣೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಪ್ರಾಪ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.