ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಕ್ಯಾರೆಟ್ ಹಾಗೂ ಬೀನ್ಸ್ ನಿಂದ ರುಚಿಕರವಾದ ಪಲ್ಯ ಮಾಡುವ ವಿಧಾನ ಇದೆ. ಇದನ್ನು ಅನ್ನದ ಜತೆ ಕೂಡ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು:
½ ಕಪ್ – ಕ್ಯಾರೆಟ್, ½ ಕಪ್- ಬೀನ್ಸ್ , 1 ಈರುಳ್ಳಿ, ಉಪ್ಪು – ರುಚಿಗೆ ತಕ್ಕಷ್ಟು, 1 ಟೇಬಲ್ ಸ್ಪೂನ್ – ಎಣ್ಣೆ, ½ ಟೀ ಸ್ಪೂನ್ – ಸಾಸಿವೆ, ¼ ಟೀ ಸ್ಪೂನ್ – ಉದ್ದಿನಬೇಳೆ, 1 – ಒಣಮೆಣಸು, ಸ್ವಲ್ಪ – ಕರಿಬೇವು, ½ ಕಪ್ – ತೆಂಗಿನಕಾಯಿ ತುರಿ, ½ ಟೀ ಸ್ಪೂನ್ – ಜೀರಿಗೆ, 1 – ಹಸಿಮೆಣಸು, 1/8 ಟೀ ಸ್ಪೂನ್ – ಅರಿಶಿನ.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ, ಹಸಿಮೆಣಸು, ಅರಿಶಿನ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಈರುಳ್ಳಿ, ಕ್ಯಾರೆಟ್, ಬೀನ್ಸ್ ಅನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ತೆಂಗಿನೆಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು ಹಾಕಿ ನಂತರ ಈರುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈರುಳ್ಳಿ ಕೆಂಪಾಗುತ್ತಿದ್ದಂತೆ ಕ್ಯಾರೆಟ್, ಬೀನ್ಸ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಇದು ಬೆಂದ ಬಳಿಕ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಪಲ್ಯ ರೆಡಿ.