ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಾರಕ್ಕೆ ಒಂದು ದಿನ ಅಂದರೆ ಪ್ರತಿ ಶುಕ್ರವಾರ ‘ಈಡಿಸ್ ಲಾರ್ವಾ ನಿರ್ಮೂಲನಾ ದಿನ’ ಆಚರಿಸಲು ತೀರ್ಮಾನಿಸಲಾಗಿದೆ.
ಅಲ್ಲವೇ ಡೆಂಗ್ಯೂ ಜ್ವರ ಲಕ್ಷಣಗಳಾದ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ನೋವು, ವಸಡು ಮತ್ತು ಮೂಗಿನಲ್ಲಿ ರಕ್ತಸ್ರಾವ, ಚರ್ಮದ ಮೇಲೆ ಗಂದೆಗಳು ಮೊದಲಾದ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ನಡೆಸಲು ದರವನ್ನು ಸಹ ನಿಗದಿಪಡಿಸಲಾಗಿದೆ.
ಇನ್ನು ಮೇಲ್ಕಂಡ ರೋಗ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಲು ಸೂಚಿಸಲಾಗಿದ್ದು, ಸ್ವಯಂ ಚಿಕಿತ್ಸೆ ಮಾಡಬೇಡಿ ಎಂದು ತಿಳಿಸಲಾಗಿದೆ. ಹೆಚ್ಚು ನೀರು ಹಾಗೂ ಇತರ ದ್ರವಾಹಾರಗಳಾದ ಓ ಆರ್ ಎಸ್, ಎಳನೀರು, ನಿಂಬೆಹಣ್ಣಿನ ಶರಬತ್ತು ಸೇವಿಸಿ ನಿರ್ಜಲೀಕರಣವನ್ನು ತಡೆಗಟ್ಟುವುದರ ಜೊತೆಗೆ ಅಗತ್ಯ ವಿಶ್ರಾಂತಿಯನ್ನು ಪಡೆಯಲು ಸೂಚಿಸಲಾಗಿದೆ.
ಜ್ವರದಿಂದ ಗುಣಮುಖರಾದ ಬಳಿಕ ವಾಂತಿ, ಹೊಟ್ಟೆ ನೋವು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಅತಿಯಾದ ನಿಶ್ಯಕ್ತಿ, ಮಂಪರು, ಸಿಡಿಮಿಡಿಗೊಳ್ಳುವಿಕೆ, ತಣ್ಣನೆಯ ಹಾಗೂ ಬಿಳಚಿದ ಚರ್ಮ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸಲು ತಿಳಿಸಲಾಗಿದ್ದು, ಮೃದುವಾದ ಆಹಾರವನ್ನು ಸೇವಿಸಿ ಹಾಗೂ ಹಗಲು ಹೊತ್ತಿನಲ್ಲಿಯೂ ಸೊಳ್ಳೆ ಪರದೆಯನ್ನು ಬಳಕೆ ಮಾಡಿ ಎಂದು ಸೂಚಿಸಲಾಗಿದೆ.