ಬಳ್ಳಾರಿ : ರೈತರು ಮೆಣಸಿನಕಾಯಿಯಲ್ಲಿ ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಅರಿತುಕೊಳ್ಳಬೇಕು. ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ಲ ಅವರು ಹೇಳಿದರು.
ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ “ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ” ಕುರಿತು ಕುರುಗೋಡು ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ರೈತರಿಗೆ ಇತ್ತೀಚೆಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರೈತರಿಗೆ ಹಲವು ಸಲಹೆಗಳನ್ನು ನೀಡಲಾಗಿದೆ.
ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಎಂ.ಆರ್ ಗೋವಿಂದಪ್ಪನವರು ಮಾತನಾಡಿ, ರೈತರು ಮೆಣಸಿನಕಾಯಿ ಬೆಳೆಯನ್ನು ಹತ್ತಿರದ ಸಾಲುಗಳಲ್ಲಿ ನಾಟಿ ಮಾಡುವುದರಿಂದ ಗಿಡಗಳಲ್ಲಿ ಬೆಳಕಿನ ಕೊರತೆ ಮತ್ತು ಗಾಳಿ ಹರಡುವಿಕೆ ಕಡಿಮೆಯಾಗಿ ಬೆಳೆಗಳಲ್ಲಿ ರೋಗ ಮತ್ತು ಕೀಟ ಭಾದೆ ಸಮಸ್ಯೆ ಹೆಚ್ಚುತ್ತದೆ. ಆದ್ದರಿಂದ ರೈತರು ಅಗಲವಾದ ಸಾಲುಗಳನ್ನು ಮಾಡಿ ನಾಟಿ ಮಾಡಬೇಕು ಮತ್ತು ಜೈವಿಕ ಶಿಲೀಂದ್ರ ನಾಶಕಗಳನ್ನು ಹೆಚ್ಚು ಬಳಸುವುದರಿಂದ ಭೂಮಿಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ರವಿ.ಎಸ್ ಅವರು ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚು ರಸಗೊಬ್ಬರಗಳನ್ನು ಅವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿಸದೆ ಗಿಡಗಳಿಗೆ ಬಳಸುವುದರಿಂದ ಮಣ್ಣು ಫಲವತ್ತತೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸೂಕ್ಷ್ಮಜೀವಿಗಳ ಸಂಖ್ಯೆ ಮತ್ತು ಅವುಗಳ ಚಟುವಟಿಕೆ ಕಡಿಮೆಯಾಗಿ ಹೊಲದಲ್ಲಿ ಪೋಷಕಾಂಶಗಳ ಲಭ್ಯತೆ ಮತ್ತು ಪ್ರಸರಣೆ ಕಡಿಮೆಯಾಗುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ರೈತರು ಹೆಚ್ಚು ಸಾವಯುವ ಮತ್ತು ಜೈವಿಕೆ ರಸಗೊಬ್ಬರಗಳನ್ನು ಬಳಸಬೇಕು ಎಂದು ರೈತರಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ವರ್, ಕೋಳೂರು ಸಹಾಯಕ ತೋಟಗಾರಿಕೆ ಅಧಿಕಾರಿ ರಾಘವೇಂದ್ರ, ಕುರುಗೋಡು ಸಹಾಯಕ ತೋಟಗಾರಿಕೆ ಅಧಿಕಾರಿ ಕಿರಣಕುಮಾರ್, ತೋಟಗಾರಿಕೆ ಸಹಾಯಕ ಪ್ರಭಾಕರ, ಕೃಷಿ ಅಧಿಕಾರಿ ಹೊಸಕೆರಪ್ಪ ಹಾಗೂ ಆತ್ಮ ಯೋಜನೆಯ ರೇಣುಕರಾದ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಮದ್ವೇಶ್ವರ್ ರಾವ್ ಸೇರಿದಂತೆ ಬೈಲೂರು ಗ್ರಾಮದ 85ಕ್ಕೂ ಹೆಚ್ಚು ಮೆಣಸಿನಕಾಯಿ ಬೆಳೆಗಾರರು, ಪ್ರಗತಿಪರ ರೈತರು ಮತ್ತೀತರರು ಉಪಸ್ಥಿತರಿದ್ದರು.