ಅಕ್ಟೋಬರ್ ತಿಂಗಳಿನಲ್ಲಿ ಹಬ್ಬಗಳದ್ದೇ ಸರಮಾಲೆ. ದಸರಾ, ದೀಪಾವಳಿ ಹೀಗೆ ಒಂದಾದ ಮೇಲೊಂದು ಹಬ್ಬಗಳು ಬರುತ್ತವೆ. ಸಾಮಾನ್ಯವಾಗಿ ಹಬ್ಬಗಳಲ್ಲಿ ಸಿಹಿ ತಿನಿಸುಗಳನ್ನು ಎಲ್ಲರೂ ಸವಿಯುತ್ತಾರೆ. ಪರಿಣಾಮ ತೂಕ ಹೆಚ್ಚಾಗುತ್ತದೆ. ಹಬ್ಬ ಮುಗಿದ ಮೇಲೆ ಹೇಗಪ್ಪಾ ತೂಕ ಇಳಿಸೋದು ಅನ್ನೋ ಚಿಂತೆ ಶುರುವಾಗುತ್ತದೆ.
ರುಚಿಯಾದ ಖಾದ್ಯಗಳನ್ನು ನೋಡಿದಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಕಷ್ಟ. ಇದರಿಂದಾಗಿ ಅತಿಯಾಗಿ ತಿನ್ನುವ ಅಭ್ಯಾಸ ಬೆಳೆದುಬಿಡುತ್ತದೆ. ಹಬ್ಬ ಹರಿದಿನಗಳಲ್ಲಿ ಮಾಡುವ ತಿನಿಸುಗಳನ್ನೆಲ್ಲ ಸಾಮಾನ್ಯವಾಗಿ ಹೆಚ್ಚು ಎಣ್ಣೆಯಲ್ಲಿ ಅಥವಾ ಹೆಚ್ಚು ಸಕ್ಕರೆಯಲ್ಲಿ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಅದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅವುಗಳನ್ನು ತಿನ್ನುವುದರಿಂದ, ತೂಕದಲ್ಲಿ ತ್ವರಿತ ಹೆಚ್ಚಳವಾಗುತ್ತದೆ. ಹಾಗಾಗಿ ಹಬ್ಬಗಳ ಸೀಸನ್‌ನಲ್ಲಿ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ಅನ್ನೋದನ್ನು ನೋಡೋಣ.
ನಿದ್ದೆ: ನಿದ್ರೆಯ ಕೊರತೆ ತೂಕ ಹೆಚ್ಚಾಗಲು ಮುಖ್ಯ ಕಾರಣಗಳಲ್ಲಿ ಒಂದು. ಹಬ್ಬ ಹರಿದಿನಗಳಲ್ಲಿ ನೆಂಟರಿಷ್ಟರು, ಮೋಜು ಮಸ್ತಿ ಇವೆಲ್ಲ ಹೆಚ್ಚಾಗಿರುತ್ತದೆ. ಪರಿಣಾಮ ಸರಿಯಾಗಿ ನಿದ್ದೆ ಮಾಡದೇ ಹರಟೆ ಹೊಡೆಯುತ್ತ ಎಂಜಾಯ್ ಮಾಡುತ್ತೇವೆ. ಇದರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಹಬ್ಬ ಹರಿದಿನಗಳಲ್ಲಿ ಸರಿಯಾಗಿ ನಿದ್ದೆ ಮಾಡುವುದು ಮುಖ್ಯ. ಕನಿಷ್ಠ 7 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕ.
ವ್ಯಾಯಾಮ: ಹಬ್ಬ ಹರಿದಿನಗಳಲ್ಲಿ ನಾವು ಮನೆಕೆಲಸಗಳಲ್ಲಿ ನಿರತರಾಗಿರುತ್ತೇವೆ. ಈ ಕಾರಣದಿಂದಾಗಿ ನಮಗಾಗಿ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಹಬ್ಬದ ಸಮಯದಲ್ಲಿ ತೂಕ ನಿಯಂತ್ರಿಸಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡಿ. ವ್ಯಾಯಾಮವು ಹೆಚ್ಚುವರಿ ಕ್ಯಾಲೊರಿಗಳನ್ನು ಸಹ ಸುಡುತ್ತದೆ. ಪ್ರತಿದಿನ 15 ನಿಮಿಷಗಳ ಕಾಲ ವ್ಯಾಯಾಮ ಅಥವಾ ಯೋಗ ಮಾಡಿದರೆ ಅದು ಪ್ರಯೋಜನಕಾರಿಯಾಗುತ್ತದೆ.
ಸಿಹಿ ತಿನಿಸು, ಕರಿದ ತಿಂಡಿಗಳಿಂದ ದೂರವಿರಿ: ಹಬ್ಬ ಹರಿದಿನಗಳಲ್ಲಿ ಸಿಹಿ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ. ತಿನಿಸುಗಳನ್ನು ನೋಡಿ ತಿನ್ನುವ ಆಸೆಯಾದರೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ತೂಕವನ್ನು ನಿಯಂತ್ರಿಸಬಹುದು. ಬೆಳಗ್ಗೆ ಗುಜಿಯಾ, ಜಲೇಬಿಯಂತಹ ಖಾದ್ಯಗಳನ್ನು ಸವಿಯುವ ಬದಲು ಮೊಳಕೆಕಾಳು, ಸೂಪ್, ಓಟ್ಸ್ ಮುಂತಾದ ಆರೋಗ್ಯಕರ ಪದಾರ್ಥಗಳನ್ನು ತಿಂದರೆ ದೇಹದಲ್ಲಿ ಶಕ್ತಿ ತುಂಬುತ್ತದೆ. ಬೇರೆ ತಿಂಡಿಗಳತ್ತ ಮನಸ್ಸು ವಾಲುವುದಿಲ್ಲ.