ಮಹಾದೇವ್ ಗೇಮಿಂಗ್ ಆ್ಯಪ್ ಪ್ರಕರಣದ ಬಿಸಿ ಬಾಲಿವುಡ್ ನಟ ರಣಬೀರ್ ಕಪೂರ್‌ಗೂ ತಟ್ಟಿದೆ. ಈಗಾಗ್ಲೇ ರಣಬೀರ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದ್ದು, ಅಕ್ಟೋಬರ್ 6ರಂದು ಹಾಜರಾಗುವಂತೆ ಸೂಚಿಸಿದೆ. ಈ ಗೇಮಿಂಗ್ ಅಪ್ಲಿಕೇಶನ್‌ನ ಪ್ರವರ್ತಕರು ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಮಹಾದೇವ್. ಇತ್ತೀಚೆಗಷ್ಟೇ ಸೌರಭ್ ಚಂದ್ರಕರ್ ಅವರ ಮದುವೆ ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗ್ತಿರೋ ಮಹಾದೇವ್ ಆಪ್ ಏನು ಅನ್ನೋದನ್ನು ನೋಡೋಣ.
ಮಹಾದೇವ್ ಆಪ್ ಒಂದು ಗೇಮಿಂಗ್ ಅಪ್ಲಿಕೇಶನ್ ಅಂತಾ ತಯಾರಕರು ಹೇಳಿಕೊಳ್ತಿದ್ದಾರೆ. ಆದರೆ ಇದರ ಮೂಲಕ ಬೆಟ್ಟಿಂಗ್ ವ್ಯವಹಾರ ನಡೆಸಲಾಗ್ತಿದೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಅನೇಕ ಪ್ರಭಾವಿ ವ್ಯಕ್ತಿಗಳ ಗಳಿಕೆಯನ್ನು ಅದರಲ್ಲಿ ಹೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲ ಭೂಗತ ಜಗತ್ತಿನ ಹಣವೂ ಇದರಲ್ಲಿ ಭಾಗಿಯಾಗಿರಬಹುದು.
ಸೌರಭ್ ಚಂದ್ರಕರ್ ಮೊದಲು ಭಿಲಾಯಿಯಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದನಂತೆ. ಕ್ರಮೇಣ ಜನಪ್ರಿಯತೆ ಹೆಚ್ಚಿಸಿಕೊಂಡು ಕೆಲ ರಾಜಕಾರಣಿಗಳ ನೆರವಿನಿಂದ ಬೆಟ್ಟಿಂಗ್ ದಂಧೆಗೆ ಧುಮುಕಿದ್ದ ಎನ್ನಲಾಗ್ತಿದೆ. ಬ್ಲಾಕ್ ಮನಿ ವೈಟ್ ಮಾಡುವ ಉದ್ದೇಶದಿಂದಲೇ ಮಹಾದೇವ್ ಆ್ಯಪ್ ಕ್ರಿಯೇಟ್ ಮಾಡಿದ್ದಾನಂತೆ.
ಮಹಾದೇವ್ ಅಪ್ಲಿಕೇಶನ್ನ ಸೃಷ್ಟಿಕರ್ತರಲ್ಲೊಬ್ಬನಾದ ಸೌರಭ್ ಚಂದ್ರಕರ್, ಛತ್ತೀಸ್‌ಗಢದ ಭಿಲಾಯಿ ನಿವಾಸಿ. ದುಬೈನಲ್ಲಿ ಮದುವೆಗೆ 200 ಕೋಟಿ ಹಣ ಖರ್ಚು ಮಾಡಿದ್ದಾನೆ. ಬಾಲಿವುಡ್ ಸ್ಟಾರ್‌ಗಳೆಲ್ಲ ಮದುವೆಯಲ್ಲಿ ಹಾಜರಿದ್ದರು. ಅವರ ಮೇಲೆಲ್ಲ ಈಗ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ.
ಈ ಪ್ರಕರಣದಲ್ಲಿ ಟೈಗರ್ ಶ್ರಾಫ್, ನೇಹಾ ಕಕ್ಕರ್, ಸನ್ನಿ ಲಿಯೋನ್, ರಾಹತ್ ಫತೇಹ್ ಅಲಿ ಖಾನ್ ಹೆಸರುಗಳು ಕೂಡ ಕೇಳಿಬಂದಿವೆ. ಮಹಾದೇವ್ ಆ್ಯಪ್‌ಗೆ ಸಂಬಂಧಿಸಿದ 417 ಕೋಟಿ ರೂಪಾಯಿ ಅಕ್ರಮ ಇಡಿ ದಾಳಿಯಲ್ಲಿ ಪತ್ತೆಯಾಗಿದೆ.
ಹವಾಲಾ ದಂಧೆಯ ಶಂಕೆ
ಯೋಗೇಶ್ ಪೋಪಟ್ ಎಂಬ ಈವೆಂಟ್ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದಾಗ ಸೌರಭ್ ಚಂದ್ರಕರ್ ಬೆಳಕಿಗೆ ಬಂದಿದ್ದ. ಮದುವೆಯಲ್ಲಿ ನಗದು ಪಾವತಿಗಾಗಿ ಹವಾಲಾ ಆಪರೇಟರ್‌ಗಳ ಸಹಾಯ ಪಡೆಯಲಾಗಿದೆ ಎಂದು ಇಡಿ ದಾಳಿಯಿಂದ ತಿಳಿದುಬಂದಿದೆ. ಯೋಗೇಶ್ ಪೋಪಟ್ ಅವರ ಈವೆಂಟ್ ಕಂಪನಿಗೆ 112 ಕೋಟಿ ರೂ., ಅದರಲ್ಲಿ 42 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳನ್ನು ಏಕೆ ವಿಚಾರಣೆಗೆ ಕರೆಯಲಾಗುತ್ತಿದೆ ಎಂಬ ಪ್ರಶ್ನೆ ಸಹಜ. ಇವರಿಗೆಲ್ಲ ಹವಾಲಾ ಮೂಲಕ ಹಣ ನೀಡಲಾಗಿದೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ.