ಮಡಿಕೇರಿ : ಹವಾಮಾನ ಇಲಾಖೆಯಿಂದ ಪ್ರತಿನಿತ್ಯದ ಮಳೆ ಪ್ರಮಾಣದ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು, ಈ ಮಾಹಿತಿ ಆಧಾರಿಸಿ ಜಿಲ್ಲಾಧಿಕಾರಿ ಅವರು ಹೆಚ್ಚಿನ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.
ರಾಜ್ಯದ ಹವಮಾನ, ಮಳೆ-ಬೆಳೆ ಸಂಬಂಧಿತ ಸ್ಥಿತಿಗತಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಬುಧವಾರ ನಡೆದ ವಿಡಿಯೊ ಸಂವಾದದಲ್ಲಿ ಮುಖ್ಯಮಂತ್ರಿ ಅವರು ಮಾತನಾಡಿದರು.ವ್ಯಾಪಕ ಮಳೆಯಿಂದ ಉಂಟಾಗಬಹುದಾದ ಅನಾಹುತ ತಡೆಯಲು ಜಿಲ್ಲಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹಾಗೆಯೇ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಗಳ ದೂರವಾಣಿ ಸಂಖ್ಯೆ ಜನರಿಗೆ ದೊರೆಯುವಂತಿರಬೇಕು ಎಂದು ಸೂಚಿಸಿದರು.
ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜುಲೈ 29 ರ ವರೆಗೆ ಮಳೆ ಇರಲ್ಲಿದೆ. ಆ ನಂತರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಒಟ್ಟು 540 ಕೊಟಿ ರೂ ಇದ್ದು, ಅಗತ್ಯ ಇರುವ ಕಡೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿ, ಈ ಸಾಲಿನಲ್ಲಿ 69 ಮನೆಹಾನಿ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 2 (ಎ ವರ್ಗ) ಮನೆಹಾನಿ (ಪೂರ್ಣ ಹಾನಿ), 6 ತೀವ್ರ ಹಾನಿ(ಬಿ ವರ್ಗ) ಹಾಗೂ 61 ಭಾಗಶಃ ಹಾನಿ (ಸಿ ವರ್ಗ) ಪ್ರಕರಣಗಳು ಕಂಡುಬಂದಿದೆ ಎಂದರು.ಸೋಮವಾರಪೇಟೆ ತಾಲ್ಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ 01 ಮಾನವ ಪ್ರಾಣ ಹಾನಿ ಪ್ರಕರಣ ವರದಿಯಾಗಿದೆ. ಉಳಿದಂತೆ 9 ಜಾನುವಾರು ಹಾನಿ, 7 ಜಾನುವಾರು ಕೊಟ್ಟಿಗೆ ಹಾನಿ ಪ್ರಕರಣ ವರದಿಯಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯನುಸಾರ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
1496 ವಿದ್ಯುತ್ ಕಂಬಗಳು, 0.5 ಕಿ.ಮೀ ವಿದ್ಯುತ್ ತಂತಿ ಹಾನಿ, 72 ಟ್ರಾನ್ಸ್ ಫಾರ್ಮರ್ ಹಾನಿ, 6 ಅಂಗನವಾಡಿ ಕಟ್ಟಡ ಹಾನಿ, 1 ಶಾಲಾ ಕಟ್ಟಡ ಹಾನಿ ಹಾಗೂ 1 ಸೇತುವೆ ಹಾನಿ ವರದಿಯಾಗಿದೆ ಎಂದು ಮಾಹಿತಿ ನೀಡಿದರು.
ಕಂದಾಯ, ಪೊಲೀಸ್, ಅರಣ್ಯ, ಪಂಚಾಯತ್ ರಾಜ್, ಅಗ್ನಿಶಾಮಕ ಹಾಗೂ ವಿವಿಧ ಇಲಾಖೆಗಳ ಜೊತೆಗೆ ಎನ್ಡಿಆರ್ಎಫ್ತಂಡಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಶಾಸಕರಾದ ಡಾ.ಮಂತರ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಖ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್, ಹಾರಂಗಿ ಜಲಾಶಯ ಎಂಜಿನಿಯರ್ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ, ಸೆಸ್ಕ್ ಎಂಜಿನಿಯರ್ ಅನಿತಾ ಬಾಯಿ, ಗ್ರಾಮೀಣ ಅಭಿವೃದ್ಧಿ ವಿಭಾಗದ ಎಂಜಿನಿಯರ್ ಸುರೇಶ್ಕುಮಾರ್ ಇತರರು ಇದ್ದರು.