ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಅಹಮದಾಬಾದ್ ಹಾಗೂ ಸೂರತ್‌ನ ಮಂದಿಗೆ ಒಂದು ರೀತಿಯ ವಿಚಿತ್ರ ಅನುಭವವಾಗಿದೆ. ಬಿಸಿಲಿನ ಝಳಕ್ಕೆ ರಸ್ತೆಗಳ ಮೇಲಿನ ಡಾಂಬಾರು ಸ್ವಲ್ಪ ಕರಗಿದ ಕಾರಣ ಪಾದರಕ್ಷೆಗಳು ರಸ್ತೆಗಳಿಗೆ ಕಚ್ಚಿಕೊಳ್ಳುತ್ತಿವೆ.
ಅಹಮದಾಬಾದ್‌ನಲ್ಲಿ ಗರಿಷ್ಠ ತಾಪಮಾನ 41 ಡಿಗ್ರೀ ಸೆಲ್ಸಿಯಸ್ ಇರುವುದು ಕಂಡು ಬಂದಿದೆ.
ಸೂರತ್‌ನ ಚಂದ್ರ ಶೇಖರ್ ಆಜ಼ಾದ್ ಸೇತುವೆ ಹಾಗೂ ಅಡಾಜನ್ ಪಾಟಿಯಾಗಳನ್ನು ಸಂಪರ್ಕಿಸುವ 200 ಮೀಟರ್ ಉದ್ದದ ರಸ್ತೆಗೆ ಹೊಸದಾಗಿ ಹಾಕಲಾದ ಡಾಂಬಾರು ಬಿಸಿಲಿನ ಕಾರಣ ಹೀಗೆ ಕರಗಿದೆ. ರಸ್ತೆಯಲ್ಲಿ ಜಾರಿ ಬೀಳುವ ಭಯದಲ್ಲಿ ದ್ವಿಚಕ್ರ ವಾಹನಗಳ ಚಾಲಕರು ನಿಧಾನವಾಗಿ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ.
ರಸ್ತೆಯ ಈ ಪರಿಸ್ಥಿತಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡ ಸೂರತ್ ನಗರ ಪಾಲಿಕೆ ಸಿಬ್ಬಂದಿ ಕೂಡಲೇ ಕರಗಿದ ಡಾಂಬಾರ್ ಮೇಲೆ ಧೂಳು ಹಾಕಿದೆ. ಮುಂಗಾರಿಗೂ ಮುನ್ನ ರಸ್ತೆಗೆ ಇನ್ನಷ್ಟು ಡಾಂಬಾರ್ ಬಳಿದ ಕಾರಣ ಮಳೆಯ ನೀರು ರಸ್ತೆಯೊಳಗೆ ಇಳಿದು ರಸ್ತೆ ಹಾಳಾಗುವ ಸಾಧ್ಯತೆ ತಪ್ಪಿಸಲು ರಿಪೇರಿ ಮಾಡಲಾಗಿತ್ತೆಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ಕೊಟ್ಟಿದ್ದಾರೆ.
ಅಹಮದಾಬಾದ್‌ನ 1.5 ಕಿಮೀ ಉದ್ದದ ಸುಂದ್ರಮ್ ನಗರ ರಸ್ತೆಗೆ ಕಳೆದ ತಿಂಗಳಷ್ಟೇ ಡಾಂಬಾರು ಹಾಕಲಾಗಿದ್ದು, ಅಲ್ಲೂ ಸಹ ಇಂಥದ್ದೇ ಅನುಭವ ಆಗಿದೆ.