ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಲ್ಲದೆ ಈ ಕಾರಣಕ್ಕಾಗಿಯೇ ಮಾನವೀಯತೆ ಇನ್ನೂ ಇದೆ ಎಂಬ ಸಮಾಧಾನದ ಭಾವವನ್ನು ಮೂಡಿಸುತ್ತದೆ. ಅಂತಹ ಮನ ಕಲಕುವ ಸ್ಟೋರಿಯೊಂದು ಇಲ್ಲಿದೆ.
ಈ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದ್ದು, ಶಾಲಾ ಬಾಲಕಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಗೊಂದಲಕ್ಕೊಳಗಾಗಿ ದಾರಿ ತಪ್ಪಿದ್ದಾಳೆ. ಹೀಗಾಗಿ ಪರೀಕ್ಷೆ ತಪ್ಪುವ ಆತಂಕದಿಂದ ಅಸಹಾಯಕಳಾಗಿ ಅಳುತ್ತಾ ನಿಂತಿದ್ದು, ಇದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್, ಸೌವಿಕ್ ಚಕ್ರವರ್ತಿ ಗಮನಿಸಿದ್ದಾರೆ.
ಬಾಲಕಿ ಬಳಿ ತೆರಳಿದ ಅವರು, ವಿಚಾರಿಸಿದ ವೇಳೆ ಕುಟುಂಬ ಸದಸ್ಯರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗಾಗಿ ತೆರಳಿದ್ದರಿಂದ ಒಬ್ಬಂಟಿಯಾಗಿ ಪರೀಕ್ಷೆಗೆ ಬಂದಿದ್ದೆ. ಆದರೆ ನನಗೆ ದಾರಿ ಗೊತ್ತಾಗುತ್ತಿಲ್ಲ ಎಂದು ಅಳುತ್ತಲೇ ವಿಷಯ ತಿಳಿಸಿದ್ದಾಳೆ. ಆಕೆಯಿಂದ ಎಲ್ಲ ಮಾಹಿತಿ ಪಡೆದ ಸೌವಿಕ್ ಚಕ್ರವರ್ತಿ ತಮ್ಮ ಅಧಿಕೃತ ವಾಹನದಲ್ಲಿ ಹತ್ತಿಸಿಕೊಂಡಿದ್ದಾರೆ.
ಅಲ್ಲದೆ ಆಕೆ ಪರೀಕ್ಷಾ ಕೇಂದ್ರಕ್ಕೆ ತೆರಳುವ ಶಯಾಮ್ ಬಜಾರ್ ನ ಆದರ್ಶ ಶಿಕ್ಷಾ ನಿಕೇತನ್ ಮಾರ್ಗದ ಉದ್ದಕ್ಕೂ ಗ್ರೀನ್ ಕಾರಿಡಾರ್ ಮಾಡಲು ಪೊಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದ್ದು, ಹೀಗಾಗಿ ವಿದ್ಯಾರ್ಥಿನಿ ಸಕಾಲಕ್ಕೆ ತನ್ನ ಪರೀಕ್ಷಾ ಕೇಂದ್ರ ತಲುಪಿದ್ದಾಳೆ.
ಪರೀಕ್ಷಾ ಕೇಂದ್ರ ತಲುಪುತ್ತಿದ್ದಂತೆ ಆಕೆಯ ಕಣ್ಣುಗಳು ಕೃತಜ್ಞತಾ ಭಾವದಿಂದ ಮಿನುಗಿದ್ದು, ಪೊಲೀಸ್ ಅಧಿಕಾರಿ ಸೌಮಿಕ್ ಚಕ್ರವರ್ತಿ ಅವರಿಗೆ ತಾವು ಮಾಡಿದ ಕಾರ್ಯಕ್ಕೆ ಸಾರ್ಥಕತೆ ಮೂಡಿದಂತಾಗಿದೆ. ಇದರ ಸ್ಟೋರಿಯನ್ನು ಕೊಲ್ಕತ್ತಾ ಪೊಲೀಸರ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಹಸ್ರಾರು ಮಂದಿ ಇದನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ ಈ ಪೋಸ್ಟನ್ನು ತಮ್ಮ ತಮ್ಮ ವಾಲ್ ಗಳ ಮೇಲೆ ಹಂಚಿಕೊಳ್ಳುತ್ತಿದ್ದಾರೆ.