ಬೆಂಗಳೂರು: ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣವೇ ಚಿಕಿತ್ಸೆ ನೀಡುವ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮಾಸಾಂತ್ಯಕ್ಕೆ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನವೆಂಬರ್ ಅಂತ್ಯಕ್ಕೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಚಾಲನೆ ನೀಡಲಿದ್ದು, ರಾಜ್ಯದ 16 ಸೂಪರ್ ಸ್ಪೆಷಾಲಿಟಿ, 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿರುವ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳಾಗಿ, 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎದೆ ನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ಕೂಡಲೇ ಅವರಿಗೆ ಇಸಿಜಿ ಮಾಡಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಪರಿಸ್ಥಿತಿ ಅವಲೋಕಿಸಿ ಗಂಭೀರ ಪರಿಸ್ಥಿತಿ ಇದ್ದರೆ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ನೀಡಲಾಗುವುದು. ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ. ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ಗೆ 35 ರಿಂದ 40 ಸಾವಿರ ರೂ. ಖರ್ಚಾಗಲಿದ್ದು, ಸ್ಪೋಕ್ ಕೇಂದ್ರಗಳಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಎರಡನೇ ಭಾಗವಾಗಿ ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೃದಯಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ಆಟೋಮೇಟೆಡ್ ಎಕ್ಸ್ ಟರ್ನಲ್ ಡೆಫಿಬ್ರಿಲೇಟರ್(AID) ಸಾಧನ ಅಳವಡಿಸಲಾಗುವುದು. ಸಾಧನ ಅಳವಡಿಕೆ ಸ್ಥಳದಲ್ಲಿ ಸಿಬ್ಬಂದಿಗೆ ಅದರ ಬಳಕೆ ಕುರಿತು ಆರೋಗ್ಯ ಇಲಾಖೆ ತಜ್ಞರಿಂದ ತರಬೇತಿ ಕೊಡಿಸಲಾಗುವುದು ಎಂದು ಹೇಳಿದ್ದಾರೆ.