![](https://kannadadunia.com/wp-content/uploads/2024/10/56863-1024x683.png)
ಇತ್ತೀಚೆಗೆ ನಡೆದ ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಹರಿಯಾಣದಲ್ಲಿ ಬಿಜೆಪಿ ‘ಹ್ಯಾಟ್ರಿಕ್’ ಜಯ ಸಾಧಿಸಿದ್ದರೆ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೇರಲು ಸರಳ ಬಹುಮತ ಗಳಿಸಿದೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನೋತ್ತರ ಎಲ್ಲ ಸಮೀಕ್ಷೆಗಳು ಉಲ್ಟಾ ಆಗಿದ್ದು, ಈ ಬಾರಿ ಕಾಂಗ್ರೆಸ್ ಗೆಲ್ಲಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದು, ಅಧಿಕಾರ ಹಿಡಿಯಲು ಸಜ್ಜಾಗಿದೆ.
ಇದರ ಮಧ್ಯೆ ಈ ಚುನಾವಣೆ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದು, ಈ ಪೈಕಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಗುರುನಾಮ್ ಸಿಂಗ್ ಠೇವಣಿ ಕಳೆದುಕೊಂಡಿದ್ದಾರೆ.
ಸಂಯುಕ್ತ ಸಂಘರ್ಷ ಪಾರ್ಟಿಯಿಂದ Pehowa ಕ್ಷೇತ್ರದಿಂದ ಕಣಕ್ಕಿಳಿದಿದ್ದ ಗುರುನಾಮ್ ಸಿಂಗ್ ಚಾರುನಿ ಕೇವಲ 1,170 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂದಿಪ್ 64,548 ಮತಗಳನ್ನು ಪಡೆದುಕೊಂಡು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜೈ ಭಗವಾನ್ ಶರ್ಮ ಅವರನ್ನು ಪರಾಭವಗೊಳಿಸಿದ್ದಾರೆ.
![](https://assets-news-bcdn.dailyhunt.in/cmd/resize/360x100_60/fetchdata20/images/b5/5d/dc/b55ddcafb4281102e42f6050fc4192a2a74c56e799bf1bbbf9bc64e3b6934c6e.webp)