ಭಾರತೀಯರು ಏನಾದರೊಂದು ಜುಗಾಡ್ ಮಾಡುವ ವಿಚಾರದಲ್ಲಿ ಸದಾ ಮುಂದು ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ.
ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲೂ ಏನಾದರೊಂದು ಆಸಕ್ತಿಕರ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಇದೀಗ, ಸೋಲಾರ್ ಚಾಲಿತವಾದ ವಿಶೇಷ ವಾಹನವೊಂದರ ವಿಡಿಯೋವನ್ನು ಗೋಯೆಂಕಾ ಶೇರ್ ಮಾಡಿಕೊಂಡಿದ್ದಾರೆ.
ಏಳು ಆಸನದ ಈ ವಾಹನವನ್ನು ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ಕೂಟರ್‌ನಂತೆ ಕಾಣುವ ಈ ವಾಹನಕ್ಕೆ ಮೇಲ್ಛಾವಣಿ ಇದ್ದು, ಅದರ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಬಿಸಿಲಿನ ದಿನಗಳಲ್ಲಿ ಪ್ರಯಾಣಿಕರಿಗೆ ನೆರಳು ನೀಡುವುದಲ್ಲದೇ, ವಾಹನಕ್ಕೆ ಬಲ ನೀಡುತ್ತದೆ ಈ ಛಾವಣಿ.
“ತ್ಯಾಜ್ಯದಿಂದ ಅಭಿವೃದ್ಧಿಪಡಿಸಿದ ಒಂದೇ ಉತ್ಪನ್ನದಲ್ಲಿ ಅದೆಷ್ಟು ಅನ್ವೇಷಣೆ, ಏಳು ಸೀಟಿನ ವಾಹನ, ಸೋಲಾರ್ ಶಕ್ತಿ ಮತ್ತು ಸೂರ್ಯನ ಬಿಸಿಯಿಂದ ರಕ್ಷಣೆ. ಇಂಥ ಅನ್ವೇಷಣೆಗಳು ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತವೆ!” ಎಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ ಗೋಯೆಂಕಾ.
ಈ ವಾಹನವನ್ನು 8-10 ಸಾವಿರ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ವಾಹನದ ಉತ್ಪಾದಕ ವಿವರಿಸುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.