ಗಾಝಾ : ಹಮಾಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಗಾಝಾ ಪಟ್ಟಿಯಲ್ಲಿದ್ದ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಸೋಮವಾರ ಪ್ರಕಟಿಸಿದೆ. ಮಾನವೀಯ ನೆಲೆಯಲ್ಲಿ ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಫೆಲೆಸ್ತೀನ್ ಗುಂಪು ಹಮಾಸ್ ಹೇಳಿದೆ.
ಒತ್ತೆಯಾಳುಗಳಿಗೆ ಆರೋಗ್ಯ ಕಾರಣಗಳಿಂದಾಗಿ ಮಾನವೀಯ ನೆಲೆಯಲ್ಲಿ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿಕೆ ತಿಳಿಸಿದೆ. ಬಿಡುಗಡೆಯಾದ ಒತ್ತೆಯಾಳುಗಳನ್ನು ನುರಿಟ್ ಕೂಪರ್ (79) ಮತ್ತು ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ.
ಗಾಜಾ ಗಡಿಯ ಬಳಿಯ ನಿರ್ ಓಜ್ನ ಕಿಬ್ಬಟ್ಜ್ನಲ್ಲಿ ಮಹಿಳೆಯರು ಮತ್ತು ಅವರ ಗಂಡಂದಿರನ್ನು ತಮ್ಮ ಮನೆಗಳಿಂದ ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ. ಅವರ ಗಂಡಂದಿರನ್ನು ಬಿಡುಗಡೆ ಮಾಡಲಿಲ್ಲ. ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ರೆಡ್ ಕ್ರಾಸ್ ಕ್ರಮ ಕೈಗೊಂಡಿತು. ಬಿಡುಗಡೆಯಾದ ಒತ್ತೆಯಾಳುಗಳು ಈಜಿಪ್ಟ್ ರಾಫಾ ಕ್ರಾಸಿಂಗ್ ತಲುಪಿದ್ದಾರೆ ಎಂದು ಈಜಿಪ್ಟ್ ಸುದ್ದಿ ಸಂಸ್ಥೆ ಸೋಮವಾರ ತಡರಾತ್ರಿ ವರದಿ ಮಾಡಿದೆ.
ಅಕ್ಟೋಬರ್ 7 ರಂದು ಹಮಾಸ್ ಬಂದೂಕುಧಾರಿಗಳು ಗಡಿ ದಾಳಿ ನಡೆಸಿದ ಎರಡು ವಾರಗಳ ನಂತರ ಹಮಾಸ್ ಶುಕ್ರವಾರ ಅಮೆರಿಕದ ತಾಯಿ ಮತ್ತು ಮಗಳು ಜುಡಿತ್ ಮತ್ತು ನಟಾಲಿ ರೋನನ್ ಅವರನ್ನು ಬಿಡುಗಡೆ ಮಾಡಿದೆ. 220 ಇಸ್ರೇಲಿ ನಾಗರಿಕರು ಹಮಾಸ್ ವಶದಲ್ಲಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಅಂದಾಜಿಸಿದೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ. ಇಸ್ರೇಲ್ ಸೋಮವಾರ ಗಾಝಾ ಮೇಲೆ ವಾಯು ದಾಳಿಯನ್ನು ತೀವ್ರಗೊಳಿಸಿದೆ. ಕಳೆದ 24 ಗಂಟೆಗಳಲ್ಲಿ ನಡೆದ ಬಾಂಬ್ ದಾಳಿಯಲ್ಲಿ 436 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.