ಪ್ರೇಮದ ಹೆಸರಲ್ಲಿ ನಡೆಯುವ ಹಿಂಸೆಯ ಕರಾಳ ಮುಖವೊಂದು ಲಿಂಕ್ಡ್ಇನ್ನಲ್ಲಿ ಬಹಿರಂಗವಾಗಿದೆ. 24 ವರ್ಷದ ಕುಶಾಲಿನಿ ಪಾಲ್ ಎಂಬ ಯುವತಿ, ತನ್ನ ಗೆಳೆಯನಿಂದ ತಾನು ಅನುಭವಿಸಿದ ದೈಹಿಕ ಹಲ್ಲೆಯ ಬಗ್ಗೆ ಕಣ್ಣೀರು ಹಾಕಿದ್ದಾಳೆ. ದೆಹಲಿಯಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾದ ಸೌತಿಕ್ ಗಂಗೂಲಿ ಎಂಬಾತ, ಕುಡಿದ ಮತ್ತಿನಲ್ಲಿ ತನ್ನನ್ನು ಮನಬಂದಂತೆ ಹೊಡೆದು, ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದನೆಂದು ಆಕೆ ಆರೋಪಿಸಿದ್ದಾಳೆ.
“ನಾನು ಅವನನ್ನು ಪ್ರೀತಿಸಿದೆ, ಆದರೆ ಆತ ನನ್ನನ್ನು ಪ್ರಾಣಿಗಳಂತೆ ನಡೆಸಿಕೊಂಡ. ನನ್ನನ್ನು ಹೊಡೆದ, ನನ್ನ ಕೂದಲನ್ನು ಎಳೆದು ತಲೆಯನ್ನು ಗೋಡೆಗೆ ಬಡಿದ ಮತ್ತು ಒದ್ದನು. ನಾನು ಅವನನ್ನು ತಡೆಯಲು ಪ್ರಯತ್ನಿಸಿದೆ, ಆದರೆ ಅವನು ಬಲಶಾಲಿಯಾಗಿದ್ದು, ನನ್ನನ್ನು ಉಸಿರುಗಟ್ಟಿಸಿ ನಾನು ಸಾಯುವ ಸ್ಥಿತಿಗೆ ಹೋದೆ” ಎಂದು ಆಕೆ ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯ ನಂತರ, ಕುಶಾಲಿನಿ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ಆಕೆಯ ದೂರು ದಾಖಲಿಸಲು ನಿರಾಕರಿಸಿದರು. “ಇದು ಸಾಮಾನ್ಯ, ನೀನು ಅವನನ್ನು ಕ್ಷಮಿಸು” ಎಂದು ಮಹಿಳಾ ಪೊಲೀಸರು ಸಲಹೆ ನೀಡಿದರೆಂದು ಆಕೆ ಆರೋಪಿಸಿದ್ದಾಳೆ. ಈ ಘಟನೆಯಿಂದ ಆಕೆ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.
“ನನ್ನ ದೇಹವು ಗಾಯಗಳಿಂದ ತುಂಬಿದೆ, ಆದರೆ ನನ್ನ ಮನಸ್ಸು ಹೆಚ್ಚು ನೋವು ಅನುಭವಿಸುತ್ತಿದೆ. ಈ ರೀತಿಯ ಪುರುಷರನ್ನು ಬೆಂಬಲಿಸಲು ನಿರ್ಮಿಸಲಾದ ವ್ಯವಸ್ಥೆಯನ್ನು ನೋಡಿ ನಾನು ಹೆಚ್ಚು ಆಘಾತಕ್ಕೊಳಗಾಗಿದ್ದೇನೆ” ಎಂದು ಆಕೆ ಬರೆದುಕೊಂಡಿದ್ದಾಳೆ.
ಈ ಘಟನೆ ಲಿಂಕ್ಡ್ಇನ್ನಲ್ಲಿ ವೈರಲ್ ಆಗಿದ್ದು, ಅನೇಕ ಜನರು ಕುಶಾಲಿನಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. “ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ. ಈ ರೀತಿಯ ಹಿಂಸೆಯ ವಿರುದ್ಧ ಧ್ವನಿ ಎತ್ತುವುದು ಸುಲಭವಲ್ಲ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.