ಹಾಸನ: ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದಿದ್ದಾರೆ.
ಟೆಂಪಲ್ ರನ್ ಮುಂದುವರೆಸಿರುವ ಹೆಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಎಕ್ಸಿಟ್ ಪೋಲ್ ಬಗ್ಗೆ ನಾನು ಇವತ್ತು ಏನೂ ಹೇಳಲ್ಲ. ದೇಶ ಉಳಿಯಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಗಬೇಕು ಎಂದರು.
ಲಕ್ಷ್ಮೀನರಸಿಂಹ ಇರುವವರೆಗೆ ನಮಗೇನೂ ತೊಂದರೆ ಇಲ್ಲ. ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ತಿಳಿಸಿದರು. ಇನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. 7 ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಪರ ಪ್ರಚಾರ ಮಾಡಿದ್ದೇನೆ. ನಾನೇ ಖುದ್ದಾಗಿ ಹೋಗಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ. 1600, ಪ್ರೌಢ ಶಾಲೆ, 600 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜು ಕೊಟ್ಟಿದ್ದಾರೆ.
4800 ಶಿಕ್ಷಕರು, 1600 ಪಿಯು ಉಪನ್ಯಾಸಕರನ್ನು ಕುಮಾರಸ್ವಾಮಿ-ಯಡಿಯೂರಪ್ಪ ಇದ್ದಾಗ ನೇಮಕ ಮಾಡಲಾಗಿದೆ. ಏಳೆಂಟು ಸಾವಿರ ಕೋಟಿ ಅನುದಾನವನ್ನು ಶಾಲಾ-ಕಾಲೇಜು ಕಟ್ಟಡಗಳಿಗೆ ನಿಡಲಾಗಿದೆ. ಈಗ ಜೆಡಿಎಸ್-ಬಿಜೆಪಿ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ದು, ನಮ್ಮ ಅಭ್ಯರ್ಥಿ ವಿವೇಕಾನಂದ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.