ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಒಂದು ಫೋನ್ ಕಾಲ್ ವಿಡಿಯೋ ವೈರಲ್ ಆಗಿದ್ದು, ಸರ್ಕಾರದಲ್ಲಿ ಮಗನ ಹಸ್ತಕ್ಷೇಪ ಎಂಬ ವಿಪಕ್ಷಗಳ ಆರೋಪಕ್ಕೆ ಇದು ಮತ್ತಷ್ಟು ಪುಷ್ಠಿ ನೀಡುವಂತಾಗಿದೆ.
ಈ ವಿಡಿಯೋ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸರ್ಕಾರದ ವಸೂಲಿ ಬಿಸಿನೆಸ್ ಹಾದಿಬೀದಿಗೆ ಬಂದಿದೆ. ಕಾಸಿಗಾಗಿ ಹುದ್ದೆ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೇ ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕು ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.
ಕರ್ನಾಟಕ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ಸಾರ್ವಜನಿಕ ಸಭೆಯಲ್ಲಿಯೇ ಎಗ್ಗಿಲ್ಲದೇ ಮಾನ ಮರ್ಯಾದೆ ಬಿಟ್ಟು ವರ್ಗಾವಣೆದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಪುತ್ರ ಸಿಎಂ ಕಚೇರಿ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂದಿದೆ. ಬೀದಿಯಲ್ಲೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ಇದಕ್ಕೆ ಸಿಎಂ ಉತ್ತರ ಕೊಡಲಿ ಎಂದು ಸರಣಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.