ಬೆಂಗಳೂರು: ರಾಜ್ಯದ ಜನರು ಬರದಿಂದ ತತ್ತರಿಸುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಂಗಾರು ಕೊರತೆಯಿಂದ 60 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಗದಗ ಜಿಲ್ಲೆಯಲ್ಲಿಯೂ ಬರ ಇದೆ. ಮೊನ್ನೆ ಗದಗ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯನವರು ಡ್ಯಾನ್ಸ್ ಮಾಡಿ ಬಂದಿದ್ದಾರೆ. ಏನು ಪರಿಹಾರ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.
ಗ್ಯಾರಂಟಿ ಕಾರ್ಯಕ್ರಮಗಳಿಗಳಿಗಾಗಿ ಕೇಂದ್ರ ಸರ್ಕಾರದ ಯೋಜನೆ ನಿಲ್ಲಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ರೈತರು ಬೆಳೆದ ಭತ್ತ ಒಣಗಿ ಹೋಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ ಸಂಪೂರ್ಣ ನಾಶವಾಗಿದೆ. ರಾಜ್ಯ ಸರ್ಕಾರ ಯಾವ ಪರಿಹಾರವನ್ನು ನೀಡುತ್ತಿದೆ? ಎಂದು ಕೇಳಿದರು.
ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಯಾವ ರಾಜ್ಯವೂ ಕೇಳದಷ್ಟು ಪ್ರಮಾಣದ ಪರಿಹಾರವನ್ನು ಕೇಂದ್ರವನ್ನು ಕೇಳಿದ್ದಾರೆ. ನಾವು ಕೇಳಿದಷ್ಟು ಪರಿಹಾರವನ್ನು ಕೇಂದ್ರ ಯಾವತ್ತೂ ಕೊಟ್ಟಿಲ್ಲ. ಪರಿಹಾರ ಕೇಳುವುದಕ್ಕೂ ಒಂದು ನಿಯಮವಿದೆ. ಸರ್ಕಾರಕ್ಕೆ ಅದರ ಗಂಭೀರತೆ ಇಲ್ಲ. ವಿದ್ಯುತ್ ವಿಚಾರ, ಅಕ್ಕಿ ವಿಚಾರದಲ್ಲಿಯೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.