
ಹಾಸನ: ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದ ಮೂಲಕ ವಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಸೊಪ್ಪು ಹಾಕಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಆಪರೇಷನ್ ಹಸ್ತ ಮಾಡುತ್ತಿರುವವರಿಗೆ ಈಗಾಗಲೇ ಹೇಳಿದ್ದೇನೆ. ನಮ್ಮ ಪಕ್ಷದಿಂದ ಯಾರಾದರೂ ಬರುವವರಿದ್ದರೆ ಮೈಸೂರು ಪೇಟ ಹಾಕಿ, ಶಾಲು ಹೊದಿಸಿ ಕರೆದುಕೊಂಡು ಹೋಗಿ ಎಂದಿದ್ದೇನೆ. ನಿನ್ನೆ, ಮೊನ್ನೆ ಗೆದ್ದಂತಹ ಕಾಂಗ್ರೆಸ್ ಶಾಸಕರು ಇನ್ನು ಕ್ಷೇತ್ರವನ್ನೇ ಸುತ್ತಿಲ್ಲ. ಅಂತಹವರು ಸಹ ಇವತ್ತು ಜೆಡಿಎಸ್‌ನಿಂದ 10, ಬಿಜೆಪಿಯಿಂದ 10 ಜನ ಶಾಸಕರು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆಂದು ಟಾಂಗ್ ನೀಡಿದರು.
ಬೇರೆ ಪಕ್ಷದ ಶಾಸಕರನ್ನು ಕಾಂಗ್ರೆಸ್ ಬಹಳ ಉಮೇದಿನಿಂದ ಸೆಳೆಯುತ್ತಿದೆ. ಸೆಳಿತಾ ಇರಲಿ, ಬೇರೆ ಪಕ್ಷದ ಶಾಸಕರನ್ನು ಸೆಳೆದು ಹಿಂದೆಲ್ಲಾ ಏನೇನಾಗಿದೆ ಎನ್ನುವುದು ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
1999ರಲ್ಲಿ ಎಸ್.ಎಂ.ಕೃಷ್ಣ ಅವರು ನಮ್ಮಿಂದಲೇ 5 ಜನ, ಬಿಜೆಪಿಯಿಂದ 10 ಜನರನ್ನು ಕರೆದುಕೊಂಡು ಹೋದರು. 2004ರಲ್ಲಿ ಎಲ್ಲಿ ಬಂದು ನಿಂತರು… 120-130 ಸೀಟುಗಳಿಂದ 62ಕ್ಕೆ ಕುಸಿದರು. ನಂತರ ಬಿಜೆಪಿಯವರು ಆಪರೇಷನ್ ಕಮಲ ಮಾಡಿ 5 ವರ್ಷ ಅಧಿಕಾರ ನಡೆಸಿದರು. ನಂತರ 40 ಸ್ಥಾನಕ್ಕೆ ಬಂದರು. ಇದೇ ಸಿದ್ದರಾಮಯ್ಯ ಅವರು 2013-2018ರಲ್ಲಿ ನಮ್ಮ ಪಕ್ಷದ ಏಳೆಂಟು ಜನರನ್ನು ಕರೆದುಕೊಂಡು ಹೋದರು. ಕೊನೆಗೆ 78 ಸೀಟಿಗೆ ಬಂದು ನಿಂತರು. ಸರ್ಕಾರ ಬಂದಾಗ ಇವೆಲ್ಲಾ ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ನಿಷ್ಠೆ ಎನ್ನುವುದು ಯಾರಿಗೂ ಇಲ್ಲಾ. ಯಾವ ಪಕ್ಷದಲ್ಲೂ ನಿಷ್ಠೆ ಎನ್ನುವುದು ಉಳಿದಿಲ್ಲ. ನಮಗೆ ತಕ್ಷಣಕ್ಕೆ ಏನು ಸಿಗುತ್ತೆ ಅನ್ನೋದು ಎಲ್ಲರಿಗೂ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.