ಬೆಂಗಳೂರು: ವಿದೇಶ ಪ್ರವಾಸ ಅದರಲ್ಲಿಯೂ ಕಾಂಬೋಡಿಯಾ ಪ್ರವಾಸದ ಬಗ್ಗೆ ಸಂತಸ ಹಂಚಿಕೊಂಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಂಬೋಡಿಯಾದಲ್ಲಿರುವ ದೇವಸ್ಥಾನ ನೋಡಿ ಮಂತ್ರಮುಗ್ದನಾದೆ ಎಂದಿದ್ದಾರೆ.
ಕಾಂಬೋಡಿಯಾ ಪ್ರವಾಸ ಮುಗಿಸಿ ವಾಪಸ್ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕಳೆದ 12 ವರ್ಷಗಳಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಟ್ಟಿದ್ದೆ. ಎಲ್ಲೂ ಹೊರಗೆ ಹೋಗಿ ಬರುವ ಅವಕಾಶ ಸಿಕ್ಕಿರಲಿಲ್ಲ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲಾ? ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲಾ. ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹಾಗಾಗಿ ಹೋಗಿದ್ದೆ ಎಂದರು.
ಕಾಂಬೋಡಿಯಾದಲ್ಲಿ ಸುವಿಶಾಲ ಪ್ರದೇಶದಲ್ಲಿ ಕಟ್ಟಿರುವ ಆಂಗ್ ಕರ್ ವಾಟ್ ಎಂಬ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಇರುವ ದೇವಸ್ಥಾನ. ಅದನ್ನು ಕಂಡು ನಾನು ವಿಸ್ಮಿನಾದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಆ ದೇಶ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಭಾರೀ ಸಂಕಷ್ಟದಲ್ಲಿ ಇದ್ದ ಆ ದೇಶ ಈಗ ತುಂಬ ಅದ್ಭುತವಾಗಿ ಬೆಳೆಯುತ್ತಿದೆ. ಕಾಂಬೋಡಿಯಾದ ಜಿಡಿಪಿ ಶೇ.7.7 ರಷ್ಟಿದೆ ಎಂದು ಅಲ್ಲಿನ ಮಂತ್ರಿಗಳೊಬ್ಬರು ಹೇಳಿದರು. ಸಾರ್ವಜನಿಕರ ಹಣದ ವಿನಿಯೋಗದ ಬಗ್ಗೆ ಅಲ್ಲಿ ಕಠಿಣ ನಿಯಮಗಳಿವೆ ಎಂದು ತಿಳಿಸಿದರು.