ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ, ಅನುದಾನ ಬಿಡುಗಡೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.
ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರು, ಮಾಧ್ಯಮಗಳ ಎದುರಲ್ಲಿ ಬಹಿರಂಗ ಚರ್ಚೆ ಮಾಡೋಣ. ಕೇಂದ್ರದಿಂದ ಅನ್ಯಾಯವಾಗುತ್ತಿರುವುದು ನಿಜ ಎಂದು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಸದನದ ಒಳಗೆ ವೀರಾವೇಷದಿಂದ ಮಾತನಾಡುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯವಾಗಿದೆ ತೆರಿಗೆ ಹಣ ಬಂದಿಲ್ಲ, ಬರ ಪರಿಹಾರ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಬರ ಪರಿಹಾರದ 2000 ರೂ.ನಲ್ಲಿ 25% ರಾಜ್ಯದ್ದು, ಉಳಿದ 75% ಕೇಂದ್ರದ್ದು. 2624 ಕೋಟಿ ರೂ. ಎಸ್ ಡಿಆರ್ ಎಫ್ ನಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಾರಲ್ಲಾ ಈ ಹಣದಲ್ಲಿ 75% ಮೊತ್ತವನ್ನು ಕೇಂದ್ರ ಸರ್ಕಾರವೇ ನೀಡಿದೆ ಎಂದು ಹೇಳಿದರು.
ನಾನು ಹೇಳೋದೇ ಸತ್ಯ ಎಂದು ಸಿಎಂ ಹೇಳುತ್ತಿದ್ದಾರೆ ನೂರು ಬಾರಿ ಸುಳ್ಳು ಹೇಳಿ ಅದನ್ನೆ ಸತ್ಯ ಮಾಡು ಎಂಬ ಗಾದೆಯಂತೆ ಮುಖ್ಯಮಂತ್ರಿಗಳು ಸುಳ್ಳನ್ನೇ ಸತ್ಯಮಾಡಬೇಕೆಂದು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಸಂಸತ್ತಿನಲ್ಲಿ ಖರ್ಗೆ ಯಾಕೆ ಸುಮ್ಮನಿದ್ದರು? ರಾಜ್ಯಸಭೆಯಲ್ಲಿ ಮೇಕೆದಾಟು ವಿಷಯದಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಮಾತನಾಡಿದಾಗ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ? ಅವರು ದನಿ ಎತ್ತಿದರೆ ನಿಮ್ಮ ಪಕ್ಷದ ಒಬ್ಬರೂ ಮಾತನಾಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದ್ದರಲ್ಲ, ಭಾವೀ ಪ್ರಧಾನಿ ಎಂದು ಹೇಳಿಕೊಂಡು ತಿರುಗುತ್ತಿದ್ದವರು ಅವರೇಕೆ ಮಾತನಾಡಲಿಲ್ಲ? ಇಲ್ಲಿ ಅನ್ಯಾಯ ಆಗಿದ್ದರೆ ಅವರು ಯಾಕೆ ಬಾಯಿ ತೆಗೆಯದೇ ಮೌನವಾಗಿದ್ದರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರಿಗೆ ಅನ್ಯಾಯ ಎನ್ನುವವರು ಕೇರಳದಲ್ಲಿ ಆನೆ ತುಳಿದು ಸತ್ತರೆ 15 ಲಕ್ಷ ರೂ. ಕೊಡುತ್ತೀರಿ. ಇಲ್ಲಿ ಆನೆ ತುಳಿದು ಸತ್ತರೆ 5 ಲಕ್ಷ ಕೊಡುತ್ತೀರಿ. ಅದನ್ನು ಪಡೆಯುವುದಕ್ಕೆ ಐವತ್ತು ಸಲ ಕಚೇರಿಗಳಿಗೆ ಅಲೆದಾಡಬೇಕಾದ ಸ್ಥಿತಿ. ಇವರ ನೀತಿ ಹೇಗಿದೆ ಎಂದರೆ ರಾಜ್ಯಕ್ಕೆ ಅನ್ಯಾಯ, ಕೇರಳಕ್ಕೆ ನ್ಯಾಯ ಎನ್ನುವಂತಾಗಿದೆ ಎಂದರು.