
ಮಂಡ್ಯ: 2028ರವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯಲ್ಲ, ಜನರೇ ಸರ್ಕಾರವನ್ನು ತೆಗೆಯುತ್ತಾರೆ. ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಜನರು ಬಯಸಿದ್ರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದು? ಜನ ಮತ್ತೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳುವ ಮೂಲಕ 3ನೇ ಬಾರಿ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ.
2028ರವರೆಗೆ ಈ ಸರ್ಕಾರ ನಡೆಯುವುದಿಲ್ಲ. ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದರು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಜನರೇ ಸರ್ಕಾರವನ್ನು ತೆಗೆಯುತ್ತಾರೆ. 2028ರವರೆಗೆ ಈ ಸರ್ಕಾರವನ್ನು ಎಳೆಯುವುದೂ ಕಷ್ಟ. ಕಾರಣ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರಲ್ಲೇ ಅಸಮಧಾನವಿದ್ದು ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ. ಶಾಸಕರು ಹಳ್ಳಿ ಹಳ್ಳಿಗೆ ತೆರಳಿ ಕೆಲಸಗಳನ್ನು ಮಾಡಲೂ ಸಾಧ್ಯವಿಲ್ಲ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.