ವರದಿಗಳ ಪ್ರಕಾರ, ಕಳ್ಳ ಮೋಡಾಸಾದಲ್ಲಿರುವ ಟ್ರಾಕ್ಟರ್ ಶೋರೂಮ್‌ಗೆ ನುಗ್ಗಿ ಅಲ್ಲಿಂದ ಟ್ರಾಕ್ಟರ್ ಅನ್ನು ಕದ್ದಿದ್ದಾನೆ. ಟ್ರಾಕ್ಟರ್ ಶೋರೂಂ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಶೋರೂಂನ ಕಾಂಪೌಂಡ್ ಒಳಗೆ ನುಗ್ಗಿದ ಕಳ್ಳ ನಿಂತಿದ್ದ ಟ್ರ್ಯಾಕ್ಟರ್ ಅನ್ನು ಸ್ಟಾರ್ಟ್ ಮಾಡಲು ಯತ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸ್ವಲ್ಪ ಸಮಯ ಪ್ರಯತ್ನಿಸಿದ ಬಳಿಕ ಟ್ರಾಕ್ಟರ್ ಸ್ಟಾರ್ಟ್ ಆಗಿದೆ. ಆದರೆ ಟ್ರ್ಯಾಕ್ಟರ್ ಪಕ್ಕದಲ್ಲಿ ನಿಂತಿದ್ದ ಕಳ್ಳ ಟ್ರ್ಯಾಕ್ಟರ್‌ನ ಬೃಹದಾದ ಟೈರ್ ಅಡಿ ಸಿಲುಕಿಕೊಂಡಿದ್ದಾನೆ. ಈ ಸಂದರ್ಭ ಟ್ರ್ಯಾಕ್ಟರ್ ಚಾಲಕನಿಲ್ಲದೇ ಅಟೋಮ್ಯಾಟಿಕ್ ಆಗಿ ಚಲಿಸಿದೆ.
ಟ್ರಾಕ್ಟರ್ ನ ಚಕ್ರದಡಿ ಸಿಲುಕಿದ ನಂತರವೂ ಎದ್ದು ನಿಂತು ಎಸ್ಕೇಪ್ ಆದ ಕಳ್ಳ
ಟ್ರ್ಯಾಕ್ಟರ್ ನ ಚಕ್ರ ತನ್ನ ಮೇಲೆ ಹರಿದ ಬಳಿಕ ಎದ್ದು ನಿಂತ ಕಳ್ಳ ತನ್ನ ಕಳ್ಳತನ ಕೃತ್ಯ ಮುಂದುವರಿಸಿದ್ದಾನೆ. ನಿಧಾನವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಹತ್ತಿ, ಟ್ರ್ಯಾಕ್ಟರ್ ಜೊತೆ ಎಸ್ಕೇಪ್ ಆಗಿದ್ದಾನೆ. ವರದಿಗಳ ಪ್ರಕಾರ, ಶೋರೂಂನ ಮಾಲೀಕ ಕಳ್ಳತನ ಬಳಿಕ ಪೊಲೀಸ್ ದೂರು ನೀಡಿದ್ದಾರೆ. ಘಟನೆ ನಡೆದ ಐದು ದಿನಗಳ ನಂತರ ಟ್ರ್ಯಾಕ್ಟರ್ ಪತ್ತೆಯಾಗಿದೆ. ಮೋಡಾಸಾದ ಶೋರೂಮ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಆದ್ರೆ ಕಳ್ಳ ಮಾತ್ರ ಇನ್ನು ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಟ್ರಾಕ್ಟರ್ ಕಳ್ಳತನಕ್ಕೆ ಯತ್ನಿಸಿದ ದರೋಡೆಕೋರನನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳ್ಳನ ಮೇಲೆ ಟ್ರ್ಯಾಕ್ಟರ್ ಹರಿದು ಹೋದ ಪರಿಣಾಮ ಇನ್ನು ಮುಂದೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಕಳ್ಳನನ್ನು ಗೇಲಿ ಮಾಡಿದ್ದಾರೆ. ಐದು ದಿನಗಳಲ್ಲಿ ಕೇವಲ 400 ಕಿಲೋಮೀಟರ್ ಓಡಿಸಲು ಸಾಧ್ಯವಾಯಿತು ಎಂದು ಕೆಲವರು ಹೇಳಿದ್ದಾರೆ.