ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಜುಲೈನಿಂದ ಉಚಿತ ವಿದ್ಯುತ್ ಸೌಲಭ್ಯ ಆರಂಭವಾಗಿದ್ದು, ಆಗಸ್ಟ್ 1ರಿಂದ ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಿಸಲಾಗುವುದು.
ಜುಲೈ ತಿಂಗಳಿನಲ್ಲಿ ನಿಗದಿತ ವಿದ್ಯುತ್ ಬಳಕೆ ಮಾಡಿದ ಗೃಹಬಳಕೆ ಗ್ರಾಹಕರಿಗೆ ಇಂದಿನಿಂದ ಶೂನ್ಯ ಬಿಲ್ ವಿತರಣೆ ಶುರುವಾಗಲಿದೆ. ಜುಲೈ 1 ರಿಂದ ಬಳಕೆಯಾದ ಗೃಹಬಳಕೆ ವಿದ್ಯುತ್ ಗೆ ಗ್ರಾಹಕರು ಕಳೆದ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇಕಡ 10ರಷ್ಟು ಹೆಚ್ಚಿನ ವಿದ್ಯುತ್ ಉಚಿತವಾಗಿ ಪಡೆದುಕೊಳ್ಳಬಹುದು. ಜುಲೈ 27ರೊಳಗೆ ನೋಂದಾಯಿಸಿದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.
ಜೂನ್ ತಿಂಗಳಿನ ವಿದ್ಯುತ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳ ಶುಲ್ಕ ಕೂಡ ಸೇರ್ಪಡೆಯಾಗಿದ್ದರೆ ಹೆಚ್ಚುವರಿ ದಿನಗಳ ಹಣ ನಿಮಗೆ ಮರುಪಾವತಿಯಾಗಲಿದೆ ಎಂದರು. ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಆ ತಿಂಗಳ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿವೆ. ಅಂತಹ ಗ್ರಾಹಕರಿಗೆ ಕ್ರೆಡಿಟ್ ಕೊಡುತ್ತೇವೆ. ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಆಗಸ್ಟ್ 5 ಕ್ಕೆ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ 1 ಕೋಟಿ ನಲವತ್ತು ಲಕ್ಷ ಕುಟುಂಬಗಳು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಜ್ಯೋತಿ ನೋಂದಣಿಗೆ ಕೊನೆ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅಂತಿಮ ಗಡುವುನೊಳಗೆ ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರುತ್ತದೆ ಎಂದರು. ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದೆ. ಆದರೆ ಇದಕ್ಕೆ ಅಧಿಕೃತವಾಗಿ ಚಾಲನೆಯನ್ನು ಅಗಸ್ಟ್ 5 ಕ್ಕೆ ನೀಡಲಾಗುತ್ತದೆ ಎಂದರು.