ಕೊಪ್ಪಳ: ಕೆಕೆಆರ್‌ಡಿಬಿ ಅನುದಾನ ಹಂಚಿಕೆ ವಿಚಾರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕರಾಗಿರುವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಬಿಜೆಪಿ ಶಾಸಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಗೆ KKRDBಯಿಂದ 140 ಕೋಟಿ ರೂಪಾಯಿ ಅನುದಾನ ಬಂದಿದೆ. ಗಂಗಾವತಿ ಕ್ಷೇತ್ರಕ್ಕೆ ಅನುದಾನ ನೀಡಿಲ್ಲವೆಂದು ರೆಡ್ಡಿ ಹೇಳಿದ್ದಾರೆ.
ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಉದ್ದೇಶಪೂರ್ವಕವಾಗಿ ಅನುದಾನ ನೀಡಿಲ್ಲ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರಕ್ಕೆ ಕೇವಲ 5 ಕೋಟಿ ರೂಪಾಯಿ ನೀಡಿದ್ದಾರೆ. ಇನ್ನುಳಿದ ಹಣವನ್ನು ಕನಕಗಿರಿ, ಕೊಪ್ಪಳ, ಯಲಬುರ್ಗಾ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಅವರ ಆರೋಪವನ್ನು ಸಚಿವ ಶಿವರಾಜ ತಂಗಡಗಿ ಅಲ್ಲಗಳೆದಿದ್ದಾರೆ. ಹಿಂದುಳಿದ ತಾಲೂಕಿನ ಆಧಾರದ ಮೇಲೆ ಅನುದಾನ ಹಂಚಿಕೆಯಾಗುತ್ತದೆ. ಮೈಕ್ರೋ ಅನುದಾನ ಹಂಚಿಕೆ ಸಚಿವರ ವಿವೇಚನೆಗೆ ಒಳಪಟ್ಟಿರುತ್ತದೆ. ಈ ಹಿಂದೆ ಯಾವ ರೀತಿ ಹಂಚಿಕೆ ಮಾಡಿದ್ದಾರೋ ಅದೇ ರೀತಿ ಹಂಚಿಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದು, ಜನಾರ್ದನ ರೆಡ್ಡಿ ಅವರ ಆರೋಪವನ್ನು ಅಲ್ಲಗಳೆದಿದ್ದಾರೆ.