ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿ ಜೂನ್, ಜುಲೈನಲ್ಲಿ ಪೂರ್ಣಗೊಳ್ಳಲಿದ್ದು, ಈ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಎರಡೂವರೆ ವರ್ಷಗಳ ಮೊದಲ ಅವಧಿ ಪೂರ್ಣಗೊಳಿಸಿದ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಮೀಸಲಾತಿ ನಿಗದಿಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ತಾಲೂಕುವಾರು ಅನುಕ್ರಮವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ ಎ, ಪ್ರವರ್ಗ ಬಿ, ಸಾಮಾನ್ಯ ಮಹಿಳೆ, ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಬೇಕು. ಆಯಾ ಪ್ರವರ್ಗದ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯಿತಿಗಳ ಪಟ್ಟಿ ಸಿದ್ದಪಡಿಸಿ, ಅವರೋಹಣ ಕ್ರಮದಲ್ಲಿ ಅದೇ ಪ್ರವರ್ಗಗಳಿಗೆ ಮೀಸಲಿಡಬೇಕೆಂದು ಹೇಳಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅನ್ವಯ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಲಾಗಿದ್ದು, ರಾಜ್ಯದ 5948 ಗ್ರಾಮ ಪಂಚಾಯಿತಿಗಳಿಗೆ ತಾಲೂಕುವಾರು ವರ್ಗವಾರು 2020ರಲ್ಲಿ ಚುನಾವಣೆ ನಡೆದ ನಂತರ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಾಗಿದೆ.
ಆಯಾ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಆಧರಿಸಿ ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿಪಡಿಸಲಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ರಚನೆಯಾಗುವ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ರಾಜ್ಯ ಚುನಾವಣೆ ಆಯೋಗದ ಪೂರ್ವ ಅನುಮತಿ ಪಡೆದು ನಿರ್ಧರಿಸುವಂತೆ ತಿಳಿಸಲಾಗಿದೆ.