ಬೆಂಗಳೂರು: ಶಾಲಾ ಸಂಚಿತ ನಿಧಿಯ ಹಣವನ್ನು ರಾಜ್ಯ ಕಚೇರಿಗೆ ಹಿಂತಿರುಗಿಸುವಂತೆ ಶಿಕ್ಷಣ ಇಲಾಖೆ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕರ ಆದೇಶದ ಮೇರೆಗೆ ಶಾಲೆಗಳಿಗೆ ಲಭ್ಯವಿರುವ ಸಂಚಿತ ನಿಧಿಯನ್ನು ಹಿಂತಿರುಗಿಸಲು ಸೂಚಿಸಲಾಗಿದೆ. ಶಾಲೆಯ ಖಾತೆಯಲ್ಲಿ ಉಳಿದಿರುವ ಎಲ್ಲಾ ಸಂಚಿತ ನಿಧಿಯ ಹಣವನ್ನು ಹಿಂತಿರುಗಿಸಿ ಶೂನ್ಯ ಬಾಕಿ ದೃಢೀಕರಣ ಕಳಿಸುವಂತೆ ಶಿಕ್ಷಣ ಇಲಾಖೆ ಹೇಳಿದ್ದು, ಇದರ ಹಿಂದೆ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಶಾಲೆಗೆ ಮೂಲ ಅವಶ್ಯಕತೆಗಳಾಗಿರುವ ಸೀಮೆ ಸುಣ್ಣ, ಕಾಗದ, ವಿದ್ಯುತ್ ಬಿಲ್, ಸಣ್ಣಪುಟ್ಟ ದುರಸ್ತಿ, ಮಕ್ಕಳ ಆರೋಗ್ಯ, ಹೊರಾಂಗಣ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನಿವಾರ್ಯ ಸಂದರ್ಭದಲ್ಲಿ ಸಂಚಿತ ನಿಧಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಈ ಹಣವನ್ನು ಕೂಡ ಹಿಂತಿರುಗಿಸಲು ಸೂಚನೆ ನೀಡಿರುವುದರಿಂದ ಶಾಲೆಗಳನ್ನು ಮುಚ್ಚುವ ಉನ್ನಾರವಿದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಶಾಲೆಗಳ ಖಾತೆಯಲ್ಲಿನ ಹಣ ಮತ್ತು ಆ ಖಾತೆಯಲ್ಲಿ ಜಮಾ ಆದ ಅತ್ಯಲ್ಪ ಬ್ಯಾಂಕ್ ಬಡ್ಡಿ ಆಯಾ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆಯಾಗಬೇಕಿದೆ. ಶಾಲೆಗಳಲ್ಲಿರುವ ಕನಿಷ್ಠ ಹಣವನ್ನು ಹಿಂದಕ್ಕೆ ಪಡೆಯುವ ದಾರಿದ್ರ್ಯ ಪರಿಸ್ಥಿತಿ ಸರ್ಕಾರಕ್ಕೆ ಬರಬಾರದಿತ್ತು ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳಿದ್ದಾರೆ.