ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಿರುವ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದ 7ನೇ ವೇತನ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ.
2024ರ ಮಾರ್ಚ್ 15ರ ವರೆಗೆ ನೌಕರರ ವೇತನ ಆಯೋಗ ಅವಧಿ ವಿಸ್ತರಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19ರಂದು ವೇತನ ಆಯೋಗ ರಚಿಸಿತ್ತು. ವರದಿ ಸಲ್ಲಿಸಲು ಆರು ತಿಂಗಳ ಗಡುವು ನೀಡಲಾಗಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಿಸಿತು. ನವೆಂಬರ್ 18ಕ್ಕೆ ಅವಧಿ ಮುಕ್ತಾಯವಾಗಲಿದೆ.
ಆಯೋಗದ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಮತ್ತೆ ಆರು ತಿಂಗಳು ವಿಸ್ತರಿಸಲಾಗಿದೆ. ಇದಕ್ಕೆ ನೌಕರರ ವಲಯದಿಂದ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಅವಧಿ ವಿಸ್ತರಿಸದೆ ನಿಗದಿತ ಅವಧಿಯಲ್ಲಿಯೇ ವೇತನ ಆಯೋಗದ ವರದಿ ಪಡೆದು ವೇತನ ಪತ್ತೆ ಪರಿಷ್ಕರಣೆ ಮಾಡುವ ವಿಶ್ವಾಸವಿತ್ತು. ಅವಧಿಯನ್ನು ವಿಸ್ತರಿಸಲಾಗಿದ್ದು, ನೌಕರರ ಅಭಿಪ್ರಾಯ ಪಡೆದು ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ತಿಳಿಸಿದ್ದಾರೆ.