ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತಾಗಿ 7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಒಂದು ತಿಂಗಳು ಬಾಕಿ ಉಳಿದಿದೆ.
ವೇತನ ಆಯೋಗದ ಅಧ್ಯಕ್ಷರು, ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ 7ನೇ ವೇತನ ಆಯೋಗವನ್ನು ನವೆಂಬರ್ ನಲ್ಲಿ ರಚಿಸಿದ್ದು, ಆರು ತಿಂಗಳ ಒಳಗೆ ಆಯೋಗ ತನ್ನ ವರದಿ ನೀಡಬೇಕಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದ್ದು, ವರದಿ ಸಲ್ಲಿಕೆಗೆ ಒಂದು ತಿಂಗಳು ಬಾಕಿ ಇದ್ದು, ಆಯೋಗದ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಶಿಫಾರಸ್ಸು ವರದಿ ಸಲ್ಲಿಸುವ ಮೊದಲು ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳು 7ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಸವಾಲು ಎದುರಿಸುತ್ತಿದೆ. ನೌಕರರ ವೇತನ ಪರಿಷ್ಕರಿಸಿದಲ್ಲಿ ಆಗಬಹುದಾದ ಆರ್ಥಿಕ ಹೊರೆ ನಿರ್ವಹಿಸಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಲಾಗಿದೆ. ವೇತನ ಪರಿಷ್ಕರಣಿಗೆ ವಾರ್ಷಿಕ 12 ಸಾವಿರ ಕೋಟಿ ರೂ. ನಿಂದ 18,000 ಕೋಟಿ ರೂ. ಅಗತ್ಯವಿದೆ ಎನ್ನಲಾಗಿದೆ.