
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರ ರೂಪಿಸಿದ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಉತ್ತರ ನೀಡಿದ್ದಾರೆ.
ತರೀಕೆರೆ ಶಾಸಕ ಶ್ರೀನಿವಾಸ ಜಿ.ಹೆಚ್. ಅವರ ಪ್ರಶ್ನೆಗೆ ಸಿಎಂ ಲಿಖಿತ ಉತ್ತರ ನೀಡಿದ್ದಾರೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನಿರ್ವಹಿಸಲು ಹಾಗೂ ಅನುಷ್ಠಾನಗೊಳಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಒಂದು ಪ್ರತ್ಯೇಕ ಕೋಶವನ್ನು ಅವಶ್ಯಕವಿರುವ ಹುದ್ದೆಗಳೊಂದಿಗೆ ಸೃಜಿಸಿ ಆದೇಶಿಸಲಾಗಿದೆ. ಅವಶ್ಯ ಮೂಲ ಸೌಲಭ್ಯಗಳ ಪೂರೈಕೆ ಮತ್ತು ತಂತ್ರಾಂಶ ಅಭಿವೃದ್ದಿಪಡಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವ ಕಾರ್ಯ ನೀತಿಗೆ ಸಂಬಂಧಿಸಿದ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ನೌಕರರು ತಮ್ಮ ಅವಲಂಬಿತ ಕುಟುಂಬ ಸದಸ್ಯರೊಂದಿಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ನಮೂನೆ ನಿಗದಿಪಡಿಸಿ ಆದೇಶಿಸಿದ್ದು, ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

