ಬೆಂಗಳೂರು: ಊಟ, ತಿಂಡಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳುವ ರೀತಿಯಲ್ಲಿ ಇನ್ನು ಮುಂದೆ ಇ-ಸ್ಟ್ಯಾಂಪ್ ಪೇಪರ್ ಮತ್ತು ಕಾನೂನು ದಾಖಲೆ ಕರಡು ಪ್ರತಿಗಳನ್ನು ಮನೆಗೆ ಬಾಗಿಲಿಗೆ ತರಿಸಿಕೊಳ್ಳಬಹುದು.
ರಾಜ್ಯ ಸರ್ಕಾರದ ಸಹಯೋಗದಲ್ಲಿ ಲೀಗಲ್ ಕರ್ನಾಟಕ ಡಾಟ್ ಕಾಮ್ ಮೂಲಕ ಮನೆ ಬಾಗಿಲಿಗೆ ಇ-ಸ್ಟ್ಯಾಂಪ್ ಪೇಪರ್ ಮತ್ತು ಕಾನೂನು ದಾಖಲೆ ಕರಡು ಪ್ರತಿ ತಲುಪಿಸುವ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಮನೆ ಬಾಡಿಗೆ ಅಥವಾ ಭೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಇ-ಸ್ಟ್ಯಾಂಪ್ ಪೇಪರ್ ಗಳಿಗಾಗಿ ಸಹಕಾರ ಸಂಘಗಳಿಗೆ ಹೋಗಬೇಕಿತ್ತು. ಕೆಲವು ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಸೇರಿ ಅನೇಕ ಕಾರಣಗಳಿಂದ ಇ-ಸ್ಟ್ಯಾಂಪ್ ಪೇಪರ್ ಸಿಗುತ್ತಿರಲಿಲ್ಲ. ಸಾರ್ವಜನಿಕರ ಅಲೆದಾಟ ತಪ್ಪಿಸಲು 24 ಗಂಟೆಯೂ ಆನ್ಲೈನ್ ಮೂಲಕ ಇ-ಸ್ಟ್ಯಾಂಪ್ ಪೇಪರ್ ಮತ್ತು ಕಾನೂನು ದಾಖಲೆ ಕರಡು ಪ್ರತಿಯನ್ನು ಜನರಿಗೆ ತಲುಪಿಸುವ ಸೇವೆಯನ್ನು ಲೀಗಲ್ ಕರ್ನಾಟಕ ಡಾಟ್ ಕಾಮ್ ಪ್ರಾರಂಭಿಸುತ್ತಿದೆ.
ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ರೂಪಿಸಿದ್ದು, ಶೀಘ್ರವೇ ಲಭ್ಯವಾಗಲಿದೆ. ಬ್ಯಾಂಕ್ ಲಾಕರ್, ಅಗ್ರಿಮೆಂಟ್, ಹೆಸರು ಬದಲಾವಣೆ, ಮನೆ ಬಾಡಿಗೆ ಕರಾರು ಪತ್ರ, ಹಳೆ ವಾಹನ ಖರೀದಿ ಸೇರಿದಂತೆ ನೂರಕ್ಕೂ ಅಧಿಕ ದಾಖಲೆಗಳಿಗೆ ಪ್ರತ್ಯೇಕ ಮಾಹಿತಿ ಆಧಾರಿತ ದಾಖಲೆಗಳು ಇರುತ್ತವೆ. ಲೀಗಲ್ ಕರ್ನಾಟಕ ಡಾಟ್ ಕಾಮ್ ನಲ್ಲಿ ಹೆಸರು ದೂರವಾಣಿ ಸಂಖ್ಯೆ ನಮೂದಿಸಿ ನೋಂದಾಯಿಸಿಕೊಳ್ಳಬೇಕು. ಅವರಿಗೆ ನೇರವಾಗಿ ದಾಖಲೆ ತಲುಪಿಸಲಾಗುವುದು ಛಾಪಾ ಕಾಗದ ತೆಗೆದುಕೊಳ್ಳುವಾಗ ಇರುವ ನಿಯಮಗಳನ್ನೇ ಅನುಸರಿಸಲಾಗುತ್ತದೆ. ಇ-ಸ್ಟ್ಯಾಂಪ್ ಪೇಪರ್ ಮಾತ್ರವಲ್ಲದೇ, ಒಪ್ಪಂದ ಮಾಡಿಕೊಳ್ಳಲು ಬೇಕಾದ ಪ್ರತಿ ಸಿಗಲಿದೆ.
ಕರಾರು ಒಪ್ಪಂದ ಮಾಡಿಕೊಳ್ಳುವವರು ವಿವರ ನಮೂದಿಸಿದಲ್ಲಿ ಅರ್ಧ ಗಂಟೆಯಲ್ಲಿ ಇ-ಸ್ಟ್ಯಾಂಪ್ ಆಧಾರಿತ ಕರಡು ಪ್ರತಿ ಗ್ರಾಹಕರು ಇರುವ ಜಾಗಕ್ಕೆ ತಲುಪುತ್ತದೆ. ಇದಕ್ಕಾಗಿ ಕನಿಷ್ಠ ಶುಲ್ಕ ನಿಗದಿಪಡಿಸಿದ್ದು, ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಬೇಕು. ಇದರಿಂದ ಉದ್ಯೋಗಿಗಳು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿ ನಾನಾ ವರ್ಗದವರಿಗೆ ಅನುಕೂಲವಾಗುತ್ತದೆ.