ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿ ಆಗಸ್ಟ್ ಮೊದಲ ದಿನವೇ ಮೀಟರ್ ರೀಡಿಂಗ್ ಮೂಲಕ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ.
ಎಸ್ಕಾಂಗಳು ನೀಡುತ್ತಿರುವ ಹೊಸ ಕರೆಂಟ್ ಬಿಲ್ ಗಳ ಹಿಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಫೋಟೋ ಮುದ್ರಿಸಲಾಗಿದೆ. ಜೊತೆಗೆ ಮಧ್ಯಭಾಗದಲ್ಲಿ ಗೃಹಜ್ಯೋತಿ ಲೋಗೋ ಮುದ್ರಿಸಲಾಗಿದ್ದು, ಹಿಂದಿನ ಬಿಲ್ ಗಳ ರೀತಿಯಲ್ಲ ವಿವಿಧ ಸ್ಲ್ಯಾಬ್ ಗಳ ದರ ಪಟ್ಟಿ ಹಾಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಸಿಎಂ ಸಿದ್ದರಾಮಯ್ಯ ಕಲಬುರಗಿಯ ಎನ್ ವಿ ಮೈದಾನದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಈಗಾಗಲೇ ಗೃಹಜ್ಯೋತಿ ಯೋಜನೆಗೆ 1.43 ಕೋಟಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ರೆ ಬಿಲ್ ಪಾವತಿಸುವಂತಿಲ್ಲ. ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿ ಉಚಿತ ವಿದ್ಯುತ್ ನೀಡಲಾಗುತ್ತೆ. 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಅರ್ಜಿ ರಿಜೆಕ್ಟ್ ಆಗಲಿದೆ ಎಂದರು.
ಜುಲೈ ತಿಂಗಳಿನಲ್ಲಿ ನಿಗದಿತ ವಿದ್ಯುತ್ ಬಳಕೆ ಮಾಡಿದ ಗೃಹಬಳಕೆ ಗ್ರಾಹಕರಿಗೆ ಇಂದಿನಿಂದ ಶೂನ್ಯ ಬಿಲ್ ವಿತರಣೆ ಶುರುವಾಗಲಿದೆ. ಜುಲೈ 1 ರಿಂದ ಬಳಕೆಯಾದ ಗೃಹಬಳಕೆ ವಿದ್ಯುತ್ ಗೆ ಗ್ರಾಹಕರು ಕಳೆದ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇಕಡ 10ರಷ್ಟು ಹೆಚ್ಚಿನ ವಿದ್ಯುತ್ ಉಚಿತವಾಗಿ ಪಡೆದುಕೊಳ್ಳಬಹುದು. ಜುಲೈ 27ರೊಳಗೆ ನೋಂದಾಯಿಸಿದ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.
ಜೂನ್ ತಿಂಗಳಿನ ವಿದ್ಯುತ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳ ಶುಲ್ಕ ಕೂಡ ಸೇರ್ಪಡೆಯಾಗಿದ್ದರೆ ಹೆಚ್ಚುವರಿ ದಿನಗಳ ಹಣ ನಿಮಗೆ ಮರುಪಾವತಿಯಾಗಲಿದೆ ಎಂದರು. ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಆ ತಿಂಗಳ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿವೆ. ಅಂತಹ ಗ್ರಾಹಕರಿಗೆ ಕ್ರೆಡಿಟ್ ಕೊಡುತ್ತೇವೆ. ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.