ಬೆಂಗಳೂರು: ರಾಜ್ಯ ದಿನಪತ್ರಿಕೆ ವಿತರಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗೆ ಇ- ಶ್ರಮ್ ಪೋರ್ಟಲ್ ಮೂಲಕ ನೋಂದಾಯಿಸಬೇಕು. ರಾಜ್ಯ ಗಿಗ್ ಕಾರ್ಮಿಕರ ಜೀವ ವಿಮಾ ಮತ್ತು ಅಪಘಾತ ಪರಿಹಾರ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಹರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವಂತೆ ಎಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಕಾರ್ಮಿಕ ಇಲಾಖೆ ಆಯುಕ್ತ ಡಾ. ಹೆಚ್.ಎನ್. ಗೋಪಾಲಕೃಷ್ಣ ಅವರು ಆದೇಶ ಹೊರಡಿಸಿದ್ದು, ಅಸಂಘಟಿತ ಕಾರ್ಮಿಕ ವಲಯದಲ್ಲಿನ ಪತ್ರಿಕಾ ವಿತರಕರು ಹಾಗೂ ಇ- ಕಾಮರ್ಸ್ ವಸ್ತುಗಳ ಡೆಲಿವರಿ ಕಾರ್ಯನಿರ್ವಹಿಸುವ ಗಿಗ್ ಕಾರ್ಮಿಕರ ನೋಂದಾಯಿಸುವಂತೆ ತಿಳಿಸಲಾಗಿದೆ.
ಪತ್ರಿಕಾ ವಿತರಕರು, ಗಿಗ್ ಕಾರ್ಮಿಕರು ದ್ವಿಚಕ್ರ ವಾಹನ ಬಳಸುವುದರಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೊಳಿಸಿದ್ದು, ಅರ್ಹರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮ ವಹಿಸುವಂತೆ ತಿಳಿಸಲಾಗಿದೆ.
ದಿನಪತ್ರಿಕೆ ವಿತರಕರು ಮೃತಪಟ್ಟಲ್ಲಿ ಯೋಜನೆಯಡಿ 2 ಲಕ್ಷ ರೂ. ಅಪಘಾತ ಪರಿಹಾರ, ಅಪಘಾತದಿಂದ ಶಾಶ್ವತ ದುರ್ಬಲರಾದಲ್ಲಿ 2ಡು ಲಕ್ಷ ರೂ.ವರೆಗೆ ಪರಿಹಾರ, ಅಪಘಾತ ಅಥವಾ ಮರಣಾಂತಿಕ ಕಾಯಿಲೆ, ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆ ವೆಚ್ಚ ಮರುಪಾವತಿಗೆ 1 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. 16 ರಿಂದ 59 ವರ್ಷ ವಯೋಮಿತಿಯ ರಾಜ್ಯದ ನಿವಾಸಿಗಳು ಸರ್ಕಾರದ ಇ- ಶ್ರಮ ಪೋರ್ಟಲ್ ನಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಅಮೆಜಾನ್, ಸ್ವಿಗ್ಗಿ, ಜೊಮೇಟೊ ಸೇರಿ ಇ- ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ, ಅರೆಕಾಲಿಕಾ, ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದಲ್ಲಿ 2 ಲಕ್ಷ ರೂ. ವಿಮಾ ಪರಿಹಾರ 2 ಲಕ್ಷ ರೂಪಾಯಿ ಜೀವ ವಿಮೆ ಸೇರಿದಂತೆ ಒಟ್ಟು 4 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ.
ಅಪಘಾತದಿಂದ ಶಾಶ್ವತ ದುರ್ಬಲಾರದಲ್ಲಿ 2 ಲಕ್ಷ ರೂ.ವರೆಗೆ, ಆಸ್ಪತ್ರೆ ವೆಚ್ಚ ಪಾವತಿಗೆ 1 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ. 18 ರಿಂದ 60 ವರ್ಷ ವಯೋಮಿತಿಯವರು ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.