ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿ ಶಾಲೆಗಳು ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನೂರು ಹೊಸ ಸೈನಿಕ ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ.
ಇದೀಗ ಇದಕ್ಕೆ ಪೂರಕವಾಗಿ ಸಹಭಾಗಿತ್ವ ಮಾದರಿಯಲ್ಲಿ 23 ಹೊಸ ಸೈನಿಕ ಶಾಲೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದು, ರಕ್ಷಣಾ ಸಚಿವಾಲಯ ಶನಿವಾರದಂದು ಈ ಕುರಿತು ಮಾಹಿತಿ ನೀಡಿದೆ.
ಸೈನಿಕ ಶಾಲೆಗಳ ಸಂಘದ ವತಿಯಿಂದ ಸಹಭಾಗಿತ್ವ ಮಾದರಿಯಲ್ಲಿ ಈಗಾಗಲೇ 19 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮತ್ತೆ 23 ಹೊಸ ಸೈನಿಕ ಶಾಲೆಗಳ ಆರಂಭಕ್ಕೆ ಅನುಮೋದನೆ ನೀಡಿರುವ ಕಾರಣ ಇವುಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಹಳೆ ಮಾದರಿಯಂತೆ ಪ್ರಸ್ತುತ 33 ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.